ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಂಡಿಸಿದ ಆರನೇ ಹಾಗೂ ಅಂತಿಮ ಬಜೆಟ್ ಆರ್ಥಿಕ ಹಿಂಜರಿತಕ್ಕೆ ಪೂರಕವಾಗಿಲ್ಲ ಎಂದು ವಿರೋಧಪಕ್ಷಗಳಾದ ಬಿಜೆಪಿ ಮತ್ತು ಎಡರಂಗ ದೂರಿವೆ.ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಿಪಿಐಎಂ ನಾಯಕ ಬಸುದೇವ್ ಆಚಾರ್ಯ ಹೇಳಿದ್ದಾರೆ.ಉದ್ಯೋಗ ಕಡಿತದ ಬಗ್ಗೆ ಆರ್ಥಿಕ ಉತ್ತೇಜನ ಸೇರಿದಂತೆ ಯಾವುದೇ ಪ್ರಮುಖ ಸಮಸ್ಯೆಗಳಿಗೆ ಬಜೆಟ್ ಪೂರಕವಾಗಿಲ್ಲ ಎಂದು ಅವರು ತಿಳಿಸಿದರು.ಇದೊಂದು ಚುನಾವಣಾ ಬಜೆಟ್, ಇದು ಸೋನಿಯಾ ಬಜೆಟ್ ಮತ್ತು ಚುನಾವಣೆಗಾಗಿ ಕಾಂಗ್ರೆಸ್ ಸಂಸತ್ತನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತಾ ಆರೋಪಿಸಿದ್ದಾರೆ.ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ದೂರಿದೆ.ಇದೊಂದು ಚುನಾವಣಾ ಗಿಮಿಕ್‌ನ ಬಜೆಟ್ ಎಂದು ಸಿಪಿಐಎಂನ ಬೃಂದಾ ಕಾರಟ್ ತಿಳಿಸಿದ್ದಾರೆ. ಸರ್ಕಾರ ರೈತರ ಬಗೆಗೆ ತೋರಿರುವ ಕಾಳಜಿ ಸುಳ್ಳು ಎಂದು ವಿಯಯ್ ಕಟಿಯಾರ್, ಈ ಹಿಂದಿನ ಅಥವಾ ಪ್ರಸ್ತುತ ಬಜೆಟ್‌ನಲ್ಲಿಯೂ ರೈತರಿಗೆ ಹೇಳಿಕೊಳ್ಳುವಂತಹ ಅಭಿವೃದ್ದಿ ಘೋಷಿಸಿಲ್ಲ ಎಂದರು.ಯುಪಿಎ ಚುನಾವಣಾ ದೃಷ್ಟಿಯಿಂದ ತನ್ನ ಕೊನೆಯ ಬಜೆಟ್ ಅನ್ನು ಮುಕ್ತಾಯಗೊಳಿಸಿದೆ. ಆರ್ಥಿಕ ಹಿಂಜರಿತ ಯಾವ ಮಟ್ಟದಲ್ಲಿ ಪರಿಣಾಮ ಬೀರಿದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ, ಅಲ್ಲದೇ ಬಜೆಟ್‌ನಲ್ಲಿ ಆ ವಿಷಯ ಪ್ರಮುಖವಾಗಿರಲೇ ಇಲ್ಲ ಎಂದು ಸಿಪಿಐಎಂನ ಪ್ರಕಾಶ್ ಕಾರಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |