ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ನಾರಾಯಣ ರಾಣೆ ಅವರ ಅಮಾನತನ್ನು ಸೋಮವಾರ ಕಾಂಗ್ರೆಸ್ ಹೈಕಮಾಂಡ್ ರದ್ದುಗೊಳಿಸಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಇದೀಗ ಅಸಮಾಧಾನಗೊಂಡಿರುವ ರಾಣೆಯ ಅಮಾನತು ಆದೇಶವನ್ನು ಪಕ್ಷದ ಹೈಕಮಾಂಡ್ ರದ್ದು ಮಾಡಿದೆ.
ನಾರಾಯಣ ರಾಣೆ ಹಾಗೂ ಪಕ್ಷದ ಪರಸ್ಪರ ಹೊಂದಾಣಿಕೆಯ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಕಾಂಗ್ರೆಸ್ ತನಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ನಾರಾಯಣ ರಾಣೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಕೊನೆಯ ಗಳಿಗೆಯಲ್ಲಿ ರಾಣೆ ಆ ಸ್ಥಾನದಿಂದ ವಂಚಿತವಾಗಿದ್ದು, ಅಶೋಕ್ ಚವಾಣ್ ಅವರನ್ನು ಕಾಂಗ್ರೆಸ್ ಸಿಎಂ ಪಟ್ಟಕ್ಕೆ ಏರಿಸಿತ್ತು.
ಕಾಂಗ್ರೆಸ್ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ನಾರಾಯಣ ರಾಣೆಯನ್ನು ಕಾಂಗ್ರೆಸ್ ಅಮಾನತುಗೊಳಿಸಿತ್ತು. ಆದರೆ ರಾಣೆ ಕೊಂಕಣ್ ಪ್ರದೇಶದಲ್ಲಿ ಪ್ರಭಾವ ಹೊಂದಿರುವುದರಿಂದ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟ ಆಗಬಾರದು ಎಂಬ ದೃಷ್ಟಿಕೋನದಿಂದ ರಾಣೆಯ ಅಮಾನತು ಆದೇಶ ರದ್ದು ಮಾಡಿ ಹೊಂದಾಣಿಕೆಗೆ ಮುಂದಾಗಿದೆ.
ಮೂರು ವರ್ಷಗಳ ಹಿಂದೆ ಶಿವಸೇನೆಯಲ್ಲಿದ್ದ ನಾರಾಯಣ ರಾಣೆ ಪ್ರಭಾವಿ ಮುಖಂಡರಾಗಿದ್ದರು. ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. |