ಉತ್ತರ ದ್ವೀಪ ಪ್ರದೇಶದಲ್ಲಿ ಶ್ರೀಲಂಕಾ ಸೇನೆಗೆ ಸವಾಲೊಡ್ಡುತ್ತಿರುವ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ ಮೊದಲು ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಲಿ ಎಂದಿರುವ ಗೃಹಸಚಿವ ಪಿ.ಚಿದಂಬರಂ, ಆ ಬಳಿಕ ಭಾರತ ಮಧ್ಯಪ್ರವೇಶಿಸಿ ಸಮಸ್ಯೆಯ ಪರಿಹಾರಕ್ಕೆ ಮಾತುಕತೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ (ಕಾಂಗ್ರೆಸ್) ನಿಲುವು ಸ್ಪಷ್ಟವಾಗಿದೆ, ಎಲ್‌ಟಿಟಿಇ ಶಸ್ತ್ರಸಜ್ಜಿತ ಉಗ್ರಗಾಮಿ ಸಂಘಟನೆಯಾಗಿದೆ. ತಾವು ಶಸ್ತ್ರಾಸ್ತ್ರ ಸನ್ಯಾಸ ಮಾಡಿದ್ದೇವೆ ಎಂದು ಘೋಷಿಸಿದ ನಂತರ ನಾವು ಮಾತುಕತೆಗೆ ಮುಂದಾಗುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅವರು ಇಲ್ಲಿ ಪಕ್ಷದ ವತಿಯಿಂದ ಭಾನುವಾರ ಸಂಜೆ ಸಂಘಟಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ತಿಳಿಸಿದರು, ಎಲ್‌ಟಿಟಿಇ ಶಸ್ತ್ರಾಸ್ತ್ರ ಕೆಳಗಿಳಿಸಿದ್ದಲ್ಲಿ ಭಾರತ ಸರ್ಕಾರ ಖಂಡಿತವಾಗಿಯೂ ಮಾತುಕತೆಗೆ ಮುಂದಾಗಲಿದೆ ಎಂದರು. 40ಲಕ್ಷ ತಮಿಳರು ವಾಸಿಸುವ ಶ್ರೀಲಂಕಾದಲ್ಲಿ ಉತ್ತಮ ಪರಿಹಾರ ಕಂಡುಕೊಂಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದರು.
ಶ್ರೀಲಂಕಾದಲ್ಲಿ ಎಲ್‌ಟಿಟಿಇ ವಿರುದ್ಧ ಸೇನಾಪಡೆ ನಡೆಸುತ್ತಿರುವ ಕದನಕ್ಕೆ ಕೂಡಲೇ ವಿರಾಮ ಘೋಷಿಸಬೇಕು ಹಾಗೂ ಅಲ್ಲಿ ತಮಿಳು ನಾಗರಿಕರನ್ನು ರಕ್ಷಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ವಿಫಲವಾಗಿವೆ ಎಂದು ಇತ್ತೀಚೆಗಷ್ಟೇ ತಮಿಳುನಾಡಿನ ಎಲ್‌ಟಿಟಿಇ ಪರ ಕೆಲವು ಸಂಘಟನೆಗಳು ಆಗ್ರಹಿಸಿರುವ ಹೇಳಿಕೆಯ ಬೆನ್ನಲ್ಲೇ ಚಿದಂಬರಂ ಈ ಪ್ರತಿಕ್ರಿಯೆ ನೀಡಿದ್ದಾರೆ. |