ದೇಶದ ವಿವಿಧೆಡೆ ಸರಣಿ ಬಾಂಬ್ ಸ್ಫೋಟಗಳಲ್ಲಿ ಶಾಮೀಲಾದ 21ಶಂಕಿತ ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರರ ವಿರುದ್ಧ ಮಂಗಳವಾರ ಇಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಅವರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ) ವಿಶೇಷ ನ್ಯಾಯಾಲಯದಲ್ಲಿ ಈ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ಸರ್ಕಾರಿ ವಕೀಲರಾದ ಕಲ್ಪನಾ ಚವಾಣ್ ತಿಳಿಸಿದ್ದಾರೆ.
ದೇಶದ ವಿವಿಧೆಡೆ 2006ರಲ್ಲಿ ಅಹಮದಾಬಾದ್, ದೆಹಲಿ, ಬೆಂಗಳೂರು ಹಾಗೂ ಸೂರತ್‌ಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ತಾವೇ ಕಾರಣ ಎಂದು ಇಂಡಿಯನ್ ಮುಜಾಹಿದೀನ್ ಹೊಣೆ ಹೊತ್ತುಕೊಂಡಿತ್ತು.
21ಆರೋಪಿಗಳ ವಿರುದ್ಧ ಮೋಕಾ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ, ಕಾನೂನುಬಾಹಿರ ಚಟುವಟಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಿಲಾಗಿದೆ.
ಕಳೆದ ವರ್ಷ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಉತ್ತರಪ್ರದೇಶದ ಅಜಾಮ್‌ಗಢ್ ಮತ್ತು ಮುಂಬೈಯಲ್ಲಿ ನೆಲೆನಿಂತಿದ್ದ ಐದು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.
ನ್ಯಾಯಾಲಯ ಇದೇ ವೇಳೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಮಂಗಳವಾರ ತನಕ ವಿಸ್ತರಿಸಿತ್ತು. ಬೆಂಗಳೂರು, ಸೂರತ್ ಮತ್ತು ದೆಹಲಿಗಳಲ್ಲಿ ಕಳೆದ ವರ್ಷ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಿಗೆ ಇಂಡಿಯನ್ ಮುಜಾಹಿದೀನ್ ಸಂಘಟನೆ ಕಾರಣ ಎನ್ನಲಾಗಿದೆ. ಅಹಮದಾಬಾದ್ ಮತ್ತು ದೆಹಲಿಗಳಲ್ಲಿ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಸಂಘಟನೆಯ ಸಾಫ್ಟವೇರ್ ಎಂಜಿನಿಯರ್ ಒಬ್ಬ ಮಾಧ್ಯಮಗಳಿಗೆ ಇಮೇಲ್ ಸಂದೇಶ ಕಳುಹಿಸಿದ್ದ.
|