ದೇಶದ ಹೆಚ್ಚಿನ ರಾಜಕೀಯ ಪಕ್ಷಗಳು 'ವಂಶಾಡಳಿತ'ವನ್ನು ಅನುಸರಿಸುತ್ತಿದ್ದು, ಇಂತಹ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸಿಬಿಡಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತದಾರರಿಗೆ ವಿನಂತಿ ಮಾಡಿಕೊಂಡಿದ್ದಾರೆ.
'ಹೆಚ್ಚಿನ ರಾಜಕೀಯ ಪಕ್ಷಗಳು ನಿರ್ದಿಷ್ಟ ಕುಟುಂಬಗಳಿಂದ ಮುನ್ನಡೆಯುತ್ತಿವೆ. ಒಂದು ಕುಟುಂಬ, ಒಂದು ಪಕ್ಷ ಎಂಬುದು ಸಾಮಾನ್ಯ ನೀತಿಯಾಗಿಬಿಟ್ಟಿದೆ. ಆದರೆ ಇದಕ್ಕೆ ಅಪವಾದವಾಗಿ ಬಿಜೆಪಿಯು ದೇಶದಲ್ಲಿರುವ ಏಕೈಕ ಪ್ರಜಾಪ್ರಭುತ್ವ ಪಕ್ಷವಾಗಿದೆ' ಎಂದು ಚೆನ್ನೈಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಮೋದಿ ಹೇಳಿದರು.
ಕಾಂಗ್ರೆಸ್‌ನಂತಹ ಪ್ರಮುಖ ಪಕ್ಷಗಳು ಕೂಡ ಕೌಟುಂಬಿಕ ರಾಜಕೀಯದಿಂದ ಹೊರತಾಗಿಲ್ಲ. ಇದು ಭಾರತೀಯ ರಾಜಕಾರಣದ ಅತ್ಯಂತ ಖೇದಕರ ಭಾಗ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿರುವುದನ್ನು ಉಲ್ಲೇಖಿಸುತ್ತಾ ಮೋದಿ, ಅಮೆರಿಕದಲ್ಲಿಯೂ 25ರಿಂದ 30 ವರ್ಷಗಳ ಕಾಲ ಕೌಟುಂಬಿಕ ಆಡಳಿತವಿತ್ತು. ಆದರೆ, ಅಲ್ಲಿನ ಜನರು ಕೂಡ ವಂಶಪಾರಂಪರ್ಯ ಆಡಳಿತದಿಂದ ರೋಸಿ ಹೋಗಿದ್ದಾರೆ ಮತ್ತು ಈಗ ಬರಾಕ್ ಒಬಾಮ ಅವರನ್ನು ಆರಿಸಿದ್ದಾರೆ ಎಂದು ವಿಶ್ಲೇಷಿಸಿದರು. |