ಕಾಂಗ್ರೆಸ್ ಆಡಳಿತದ ಕುರಿತು ಬಹಿರಂಗ ಟೀಕೆಗೆ ಇಳಿದಿರುವ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಮಂಗಳವಾರ, ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಅನ್ನು ದಿಗ್ವಿಜಯ್ ಸಿಂಗ್ ತಪ್ಪು ದಾರಿಗೆ ಎಳೆಯುತ್ತಿರುವುದಾಗಿ ಆರೋಪಿಸಿದ ಸಿಂಗ್, ಕಾಂಗ್ರೆಸ್ ಹೃದಯಶೂನ್ಯ(ಕಪಟ)ವಾದ ಪಕ್ಷವಾಗಿದೆ ಎಂದು ಹೇಳಿದರು.
ಒಂದು ವೇಳೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿಗೆ ಗುಡ್ ಬೈ ಹೇಳಿದರೆ ಅದಕ್ಕೆ ದಿಗ್ವಿಜಯ್ ಹೊಣೆ, ಅಲ್ಲದೇ ನಾನೇನು ಅವರನ್ನು ಭಿಕ್ಷುಕ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಕೇಂದ್ರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸು ಪಡೆದಾಗ, ನಾವು(ಸಮಾಜವಾದಿ ಪಕ್ಷ) ಸಹಾಯ ಮಾಡಿದ್ದೇವೆ. ಆ ನೆಲೆಯಲ್ಲಿ ನಾವು ಕಠಿಣ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ರಕ್ಷಿಸಿದ್ದೇವೆ ಎಂದು ಅಮರ್ ಸಿಂಗ್ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಸಮಾಜವಾದಿ ಪಕ್ಷದ ಹತ್ತಿರ ಭಿಕ್ಷಾ ಪಾತ್ರೆ ಹಿಡಿದು ಹೋಗಿಲ್ಲ ಎಂದು ಎಐಸಿಸಿ ಪ್ರಭಾರ ಪ್ರಧಾನ ಕಾರ್ಯದರ್ಶಿಯಾಗಿರುವ ದಿಗ್ವಿಜಯ್ ಸಿಂಗ್ ಸೋಮವಾರ ಗಂಭೀರವಾಗಿ ಆರೋಪಿಸಿದ್ದರು. |