ಜನತಾ ಪಾರ್ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅವರನ್ನು ವಕೀಲರ ಗುಂಪೊಂದು ಸೇರಿ ಮದ್ರಾಸ್ ಹೈಕೋರ್ಟ್ ನ್ಯಾಯಾಲಯದ ಆವರಣದಲ್ಲೇ ಥಳಿಸಿದ ಘಟನೆ ಮಂಗಳವಾರ ನಡೆದಿದೆ.
ನ್ಯಾಯಮೂರ್ತಿಗಳಾದ ಪಿ.ಕೆ.ಮಿಶ್ರಾ ಮತ್ತು ಕೆ.ಚಂದ್ರು ಅವರ ನ್ಯಾಯಾಪೀಠದ ಆವರಣದೊಳಗೆ ನುಗ್ಗಿದ 'ಕಾನೂನು ಪಾಲಕ' ವಕೀಲರ ದಂಡೊಂದು, ಎಲ್ಟಿಟಿಇ ಪರವಾಗಿ ಘೋಷಣೆ ಕೂಗುತ್ತಾ ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೇರಿತು. ಸ್ವಾಮಿ ಅವರು ಚಿದಂಬರಂ ಮಂದಿರ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ನ್ಯಾಯಾಲಯಕ್ಕೆ ಬಂದಿದ್ದರು.
ಎಲ್ಟಿಟಿಇ ಪರ ಸ್ಲೋಗನ್ ಕೂಗುತ್ತಿದ್ದ ವಕೀಲರ ದಂಡು, ನ್ಯಾಯಾಲಯದೊಳಗೆ ನುಗ್ಗಿ ಬಾಗಿಲಿನ ಚಿಲಕ ಹಾಕಿ, ಸ್ವಾಮಿ ಅವರ ಮೇಲೆ ಕೋಳಿಮೊಟ್ಟೆ ತೂರಿತು ಮಾತ್ರವಲ್ಲದೆ ಮತ್ತು ಇಬ್ಬರು ನ್ಯಾಯಾಧೀಶರ ಎದುರೇ ಯದ್ವಾತವ್ದಾ ಎಳೆದಾಡಿ ಹಲ್ಲೆ ಮಾಡಿತು.
ಶ್ರೀಲಂಕಾದಲ್ಲಿ ತಮಿಳರ ಮೇಲೆ 'ದೌರ್ಜನ್ಯ' ನಡೆಯುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ವಾರಗಳಿಂದ ತಮಿಳುನಾಡಿನ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದರು. |