'ಮಧ್ಯಂತರ' ವಿತ್ತ ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಮಧ್ಯಂತರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸುವಾಗ 'ಕೈ' ಬಗ್ಗೆ ಪ್ರಸ್ತಾಪಿಸುತ್ತಾ, ಮಿತ್ರಪಕ್ಷಗಳ ಮೇಜು ಗುದ್ದುವಿಕೆಯ ಶಹಭಾಸ್‌ಗಿರಿ ಪಡೆದಿದ್ದರು. ಇದೀಗ ಅದೇ 'ಕೈ'ಯನ್ನು ತಿರುಚುತ್ತಾ ವಿರೋಧ ಪಕ್ಷ ಬಿಜೆಪಿ, ಚುನಾವಣಾ ಹೋರಾಟಕ್ಕೆ ವಾಗ್ಯುದ್ಧದ ಚಾಲನೆ ನೀಡಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಮಂಗಳವಾರ ಪ್ರತಿಕ್ರಿಯೆ ನೀಡುತ್ತಾ, ಬೆಲೆ ಏರಿಕೆ, ರೈತರ ಆತ್ಮಹತ್ಯೆ, ಆರ್ಥಿಕ ಬಿಕ್ಕಟ್ಟು ಮತ್ತು ಸತ್ಯಂ ಹಗರಣದ ಹಿಂದಿರುವ 'ಕೈ'ಯನ್ನು ಜನತೆ ಗುರುತಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
"ಬೆಲೆ ಏರಿಕೆಯನ್ನು ಸಾಧ್ಯವೆಂದು ಮಾಡಿ ತೋರಿಸಿದ ಕೈ, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಕೈ, ದೇಶದ ಅರ್ಥ ವ್ಯವಸ್ಥೆಯನ್ನು ಈಗಿನ ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದ ಕೈ, ಸತ್ಯಂ-ಮೇತಾಸ್ ಹಗರಣವನ್ನು ಸಾಧ್ಯವಾಗಿಸಿದ ಕೈಯನ್ನು ಜನರು ಗುರುತಿಸುವ ಸಮಯ ಬರುತ್ತಿದೆ" ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಆಡ್ವಾಣಿ ಅವರು ವ್ಯಂಗ್ಯವಾಡಿದ್ದಾರೆ.
ಪ್ರಣಬ್ ಅವರು "ದೇಶಕ್ಕೆ ಸಹಾಯ ಮಾಡಬಲ್ಲ ಕೈ" ಬಗ್ಗೆ, ಪರೋಕ್ಷವಾಗಿ ಕಾಂಗ್ರೆಸ್‌ನ ಹಸ್ತದ ಚಿಹ್ನೆಯನ್ನು ಉಲ್ಲೇಖಿಸುತ್ತಾ ಬಜೆಟ್ ಭಾಷಣ ಮುಗಿಸುತ್ತಿದ್ದಾಗ, ಯುಪಿಎ ಮಿತ್ರಪಕ್ಷಗಳು ಮೇಜುಗುದ್ದಿ 'ಕೈ'ಯ ಪಾರಮ್ಯವನ್ನು ಒಪ್ಪಿಕೊಂಡಿದ್ದವು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಮಂಗಳವಾರ ಆಡ್ವಾಣಿ ಮಾತನಾಡುತ್ತಿದ್ದರು.
ಈ ಸಂದರ್ಭ ಹಿರಿಯ ಕಾಂಗ್ರೆಸ್ ಮುಖಂಡ ವಿ.ಕಿಶೋರ್ ಚಂದ್ರ ದೇವ್ ಅವರು ಮಾತನಾಡುತ್ತಾ, ಭಯೋತ್ಪಾದನೆಯು 'ಮಾರಾಟದ ಸರಕು' ಆಗಲಾರದು, ಯುಪಿಎ ಸಾಧನೆಯೇ ಅದನ್ನು ಮರಳಿ ಅಧಿಕಾರಕ್ಕೇರಿಸುತ್ತದೆ ಎಂದಿದ್ದರು. 'ದೆಹಲಿಗೆ ದೊರೆತ ಜನಾದೇಶವೇ ದೇಶದ ಜನಾದೇಶದ ಮುನ್ಸೂಚನೆ' ಎಂದು ಕಾಂಗ್ರೆಸ್ ವಿಜಯವನ್ನು ಉಲ್ಲೇಖಿಸುತ್ತಾ ಹೇಳಿದ ದೇವ್, ಭಯೋತ್ಪಾದನೆ ವಿಷಯವನ್ನು ಜನ ತಿರಸ್ಕರಿಸಿದ್ದಾರೆ ಎಂಬುದನ್ನು ಇದು ತೋರಿಸಿದೆ ಎಂದರು.
ವಿರೋಧ ಪಕ್ಷದ ನಾಯಕರೂ ಆಗಿರುವ ಆಡ್ವಾಣಿ ಅವರು ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸುತ್ತಾ, ಸರಕಾರವು ಸರಕಾರೀ ಯಂತ್ರಗಳನ್ನು, ಅದು ಸಿಬಿಐ ಇರಲಿ, ಚುನಾವಣಾ ಆಯೋಗವಿರಲಿ, ಸಂಸತ್ತೇ ಇರಲಿ, ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಚರ್ಚೆ ಸಂದರ್ಭ ಹೆಚ್ಚಿನ ಸಂಸದರು, ಸಚಿವರು ಹಾಜರಿರಲಿಲ್ಲ. |