ಮುಂಬೈ ಭಯೋತ್ಪಾದನಾ ದಾಳಿಗೆ ಸ್ಥಳೀಯರ ಸಹಕಾರ ಇಲ್ಲದೇ ಇಂತಹ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ಎಲ್.ಕೆ.ಆಡ್ವಾಣಿ ಅವರು ಆರೋಪಿಸುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇದೇ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕ್ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ತಳುಕು ಹಾಕುವ ಯತ್ನ ಮಾಡುತ್ತಿರುವ ಬೆನ್ನಲ್ಲೇ, ಅಡ್ವಾಣಿಯವರ ಈ ಹೇಳಿಕೆ ಹೊಸ ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ." ಸ್ಥಳೀಯರ ಸಹಕಾರವಿಲ್ಲದೆ ಇಂತಹ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ತಡೆ ಹಿಡಿಯುವವರು ಯಾರು ಎಂದು ಬಹಿರಂಗವಾಗಬೇಕು. ಇದು ಕೇವಲ ವೋಟ್ ಬ್ಯಾಂಕ್ ರಾಜಕೀಯ" ಎಂದು ಮೋದಿ ನಾಗ್ಪುರದಲ್ಲಿ (ಫೆ.8) ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಹರಿಹಾಯ್ದಿದ್ದರಲ್ಲದೆ, ಯುಪಿಎ ಮೇಲೆ ದಾಳಿ ನಡೆಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಿಲಾಂಜಲಿಯಿಡುವಂತೆ ಆಗ್ರಹಿಸಿದ್ದರು. ಇದೀಗ ನರೇಂದ್ರ ಮೋದಿಯವರ ಹೇಳಿಕೆಯ ಜಾಡನ್ನೇ ಹಿಡಿದು ಹೊರಟಿರುವ ಆಡ್ವಾಣಿ, ಭಯೋತ್ಪಾದನಾ ದಾಳಿ ಕುರಿತಂತೆ ಯುಪಿಎ ಸರ್ಕಾರ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಏತನ್ಮಧ್ಯೆ ಮುಂಬೈ ಪೊಲೀಸ್ ಕಮೀಷನರ್ ಹಸನ್ ಗಫೂರ್ ಕೂಡ ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮುಂಬೈ ದಾಳಿಯ ಹಿಂದೆ ಸ್ಥಳೀಯರ ಕೈವಾಡ ಇರುವ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ 16ಮಂದಿ ಪ್ರಜೆಗಳಲ್ಲಿ ಕೆಲವು ಭಾರತೀಯರು ಇದ್ದಾರೆ ಎಂದು ತಿಳಿಸಿದ್ದರು.ದಾಳಿ ಬಗ್ಗೆ ಗಫೂರ್ ಬಾಯಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಗರಂ ಆದ ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಕಮೀಷನರ್ ಗಫೂರ್ ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ರಾಗಬದಲಿಸಿದ್ದರು.ದಾಳಿ ಕುರಿತಂತೆ ಸ್ಥಳೀಯರ ಕೈವಾಡ ಕುರಿತಂತೆ ಶಂಕೆ ವ್ಯಕ್ತಪಡಿಸಿರುವ ನರೇಂದ್ರ ಮೋದಿ ವಿರುದ್ದ ಗೃಹಸಚಿವ ಪಿ.ಚಿದಂಬರಂ ವಾಗ್ದಾಳಿ ನಡೆಸಿ, ಎಲ್ಲ ವಿಷಯ ತಿಳಿದಿದೆ ಎಂದ ಮೇಲೆ ಮೋದಿಗೂ ಪಾಕ್ ನಂಟಿದೆಯೇ ಎಂಬ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು.ಅದಕ್ಕೆ ಪೂರಕ ಎಂಬಂತೆ ಪಾಕಿಸ್ತಾನ ಕೂಡ ಮೋದಿ ಹೇಳಿಕೆಯಂತೆ, ಪಾಕ್ ಕೂಡ ಸ್ಥಳೀಯರ ನೆರವಿನಿಂದಲೇ ಘಟನೆ ಸಂಭವಿಸಿರಬಹುದು ಎಂದು ಎಡಬಿಡಂಗಿ ಹೇಳಿಕೆ ನೀಡಿತ್ತು. |