ಮುಂಬೈ ಭಯೋತ್ಪಾದನಾ ದಾಳಿಯ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ನಡವಳಿಕೆ ಮತ್ತೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ಆರು ಮಂದಿ ಉಗ್ರರನ್ನು ಬಂಧಿಸಿರುವುದಾಗಿ ಹೇಳಿದ್ದ ಪಾಕ್ ಸೋಮವಾರ ಕೇವಲ ಒಬ್ಬ ಉಗ್ರನನ್ನು ಮಾತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಸಾಕಿ ಮಹಮ್ಮದ್ ಕೌಟ್ ಸೋಮವಾರ ಲಷ್ಕರ್ ಎ ತೊಯ್ಬಾದ ಬಂಧಿತ ಉಗ್ರ ಹಮೀದ್ ಅಮಿನ್ ಸಾದಿಕ್‌ನನ್ನು 15 ದಿನಗಳ ಕಾಲ ಪಾಕ್‌ನ ತನಿಖಾ ಸಂಸ್ಥೆ ವಶಕ್ಕೆ ಒಪ್ಪಿಸಿದ್ದಾರೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ನ್ಯಾಯಾಲಯದಲ್ಲಿ ಸಾದಿಕ್‌ನನ್ನು ಹಾಜರುಪಡಿಸಲಾಗಿತ್ತು.
ಆದರೆ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಮುಂಬೈ ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು. ದಾಳಿಗೆ ಸಂಬಂಧಿಸಿದಂತೆ ಒಂಬತ್ತು ಮಂದಿಯ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿತ್ತು. ಆರು ಮಂದಿ ಉಗ್ರರು ನಮ್ಮ ವಶದಲ್ಲಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಲಿಕ್ ಹೇಳಿದ್ದರು.
ಏತನ್ಮಧ್ಯೆ ಬಂಧಿತ ಐದು ಮಂದಿ ಏನಾಗಿದ್ದಾರೆ ?ಎಲ್ಲಿದ್ದಾರೆ ? ಎಂಬ ಬಗ್ಗೆ ಪಾಕ್ ಈವರೆಗೂ ಅಧಿಕೃತವಾಗಿ ಏನೂ ಬಾಯ್ಬಿಡುತ್ತಿಲ್ಲ. ಅಲ್ಲದೇ ಜಮಾತ್ ಉದ್ ದಾವಾದ ಮುಖಂಡ ನಾಜಿರ್ ಅಹ್ಮದ್‌ನನ್ನು ಕೂಡ ಬಂಧಿಸಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆಯಾದರೂ ಕೂಡ ಪಾಕ್ ಸರ್ಕಾರ ಅಧಿಕೃತವಾಗಿ ಖಚಿತಪಡಿಸಿಲ್ಲ.
ಈ ಮೊದಲು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಎ ತೊಯ್ಬಾದ ಕಮಾಂಡರ್ ಜಾಕಿ ಉರ್ ರೆಹಮಾನ್ ಲಕ್ವಿ ಹಾಗೂ ಜರಾರಾ ಷಾನನ್ನು ಬಂಧಿಸಲಾಗಿತ್ತು ಎಂದು ಪಾಕ್ ಮಾಧ್ಯಮಗಳು ಭಾನುವಾರ ವರದಿಯಲ್ಲಿ ತಿಳಿಸಿದ್ದವು. ಆದರೆ ಮರುದಿನವೇ ವಿರೋಧಾಭಾಸದ ಹೇಳಿಕೆ ನೀಡಿದ ಪಾಕ್, ಅವರಿಬ್ಬರೂ ಐಎಸ್‌ಐ ವಶದಲ್ಲಿದ್ದಾರೆ ಎಂದು ಹೇಳಿತ್ತು. ಒಟ್ಟಾರೆ ಪಾಕ್ ಹೇಳಿಕೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. |