ಭಾರತದ ನೌಕಾ ಮಾರ್ಗದ ಮೂಲಕ ಉಗ್ರರು ಅಣ್ವಸ್ತ್ರ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಭಾರತೀಯ ನೌಕಪಡೆಯ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಅವರು ಬುಧವಾರ ಎಚ್ಚರಿಕೆ ನೀಡಿದ್ದು, ಆ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಉಗ್ರರು ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ಕಾರ್ಗೋ ಕಂಟೈನರ್ ಮೂಲಕ ಭಾರತದೊಳಕ್ಕೆ ಕಳ್ಳಸಾಗಣೆ ಮಾಡುವ ಸಾಧ್ಯತೆ ಇರುವುದಾಗಿಯೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರತದ ನಗರಗಳ ಮೇಲೆ ತಾಲಿಬಾನ್ ಉಗ್ರಗಾಮಿ ಸಂಘಟನೆ ದಾಳಿ ಮಾಡುವ ಸಂಚು ನಡೆಸಿದೆ ಎಂಬ ಅಂಶ ಆಘಾತಕಾರಿ ಅಂಶ ಹೊರಬೀಳುತ್ತಿದ್ದಂತೆಯೇ ನೌಕಾಪಡೆಯ ಅಡ್ಮಿರಲ್ ಈ ಹೇಳಿಕೆ ನೀಡಿದ್ದಾರೆ.
ಆದರೆ ಈ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಲಭಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಮೆಹ್ತಾ, ಉಗ್ರರು ಅಣ್ವಸ್ತ್ರ ದಾಳಿ ನಡೆಸುವ ಸಂಭವ ಇರುವ ಸಾಧ್ಯತೆ ಇರುವುದಾಗಿ ಹೇಳಿದರು. ದಾಳಿಯ ಸಂದರ್ಭದಲ್ಲಿ ಉಗ್ರರು ಅಣ್ವಸ್ತ್ರ ಶಸ್ತ್ರಾಸ್ತ್ರ ಬಳಸುವ ಸಾಧ್ಯತೆ ಬಹಳಷ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. |