ರಾಜಕೀಯ ಲಾಭಕ್ಕಾಗಿ ಅಯೋಧ್ಯೆ ವಿಷಯವನ್ನು ಮತ್ತೆ ಕೆದಕುತ್ತಿದೆ ಎಂದು ದೂರಿರುವ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್, ಬಾಬ್ರಿ ಮಸೀದಿ ಧ್ವಂಸ ವಿಷಯದಲ್ಲಿ ಈಗಷ್ಟೇ ಎಸ್ಪಿ ಸೇರಿರುವ ಕಲ್ಯಾಣ್ ಸಿಂಗ್‌ಗೆ ಎಂದಿಗೂ ತಮ್ಮ ಪಕ್ಷ 'ಕ್ಲೀನ್ ಚಿಟ್' ನೀಡಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಅದಕ್ಕೆ ಕಾಂಗ್ರೆಸ್ ಕೂಡ ಸಮಾನ ಕಾರಣ ಎಂದು ದೂಷಿಸಿದರು.
ಮಸೀದಿ ಉರುಳುತ್ತಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಆದುದರಿಂದ ಅದು ಕೂಡ ಅಂದಿನ ಕಲ್ಯಾಣ್ ಸಿಂಗ್ ಅವರ ಬಿಜೆಪಿ ಸರಕಾರದಷ್ಟೇ ಸಮಾನ ಹೊಣೆಗಾರನಾಗಿತ್ತು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ ಅಮರ್ ಸಿಂಗ್, ಈ ಬಗ್ಗೆ ಇನ್ನಷ್ಟು ಸ್ಪಷ್ಟನೆ ಅನಗತ್ಯ. ಕಲ್ಯಾಣ್ ಸಿಂಗ್ ಈಗಾಗಲೇ ನೈತಿಕ ಹೊಣೆ ಹೊತ್ತಿದ್ದಾರೆ. ಅವರು ಬದಲಾಗಿದ್ದಾರೆ ಮತ್ತು ಬಿಜೆಪಿಯನ್ನು ದೂರವಿಡಲು ಪಣ ತೊಟ್ಟಿದ್ದಾರೆ. ನಾವು ಅವರ ನಿರ್ಧಾರ ಸ್ವಾಗತಿಸುತ್ತೇವೆ ಎಂದರು.
ಕೋಮು ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಕಲ್ಯಾಣ್ ಅವರು ಬೇಷರತ್ ಬೆಂಬಲ ನೀಡಿದ್ದಾರೆ. ಮೂಲಭೂತವಾದಿ ಶಕ್ತಿಗಳನ್ನು ಸೋಲಿಸಲೆಂದೇ ಕಲ್ಯಾಣ್ ಅವರು ಮುಲಾಯಂ ಸಿಂಗ್ ಜತೆ ಕೈಜೋಡಿಸಿದ್ದಾರೆ ಎಂದ ಅಮರ್ ಸಿಂಗ್, ಕಾಂಗ್ರೆಸ್ ಅಲ್ಲಿ ಮಸೀದಿ ಪುನರ್ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರೆ, ಮಂದಿರ ಕಟ್ಟುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ಈಗಲೂ ಅಧಿಕಾರದಲ್ಲಿದೆ. ಹಾಗಿದ್ದರೆ ಮಸೀದಿ ಏಕೆ ಕಟ್ಟುತ್ತಿಲ್ಲ ಎಂದು ಪ್ರಶ್ನಿಸಿದರು. |