ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ಮೂಗುದಾರ ಹಾಕುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಟಿವಿ ಮಾಧ್ಯಮಗಳ ನೇರ ಪ್ರಸಾರದ ಸಮಯದಲ್ಲಿ ಸುದ್ದಿಯ ಅಗತ್ಯತೆ, ರೋಚಕತೆಯನ್ನು ಮನಗಂಡು ಸ್ವಯಂ ಸೆನ್ಸಾರ್ ಮಾಡಿಕೊಳ್ಳಬೇಕು ಎಂದು ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಆನಂದ್ ಶರ್ಮಾ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ಟಿವಿ ಮಾಧ್ಯಮದಲ್ಲಿ ಮುಂಬೈ ಉಗ್ರರ ದಾಳಿಯ ನೇರ ಪ್ರಸಾರದ ವೀಕ್ಷಣೆ ಜನತೆಗೆ ಲಭ್ಯವಾಗಿತ್ತು. ಇದರಿಂದ ಆಗುವ ಪರಿಣಾಮ, ತೊಂದರೆಗಳ ಬಗ್ಗೆ ಯುಪಿಎ ಸರ್ಕಾರ ಅನೇಕ ಬಾರಿ ಸಭೆ ಸೇರಿ ಚರ್ಚೆ ನಡೆಸಿದೆ. ಸುದ್ದಿ ಪ್ರಸಾರ ಸಮಿತಿಗಳಾದ ನ್ಯೂಸ್ ಬ್ರೊಡ್‌ಕಾಸ್ಟಿಂಗ್ ಅಸೋಸಿಯೇಶನ್ (NBA), ಹಾಗೂ ದಿ ಇಂಡಿಯನ್ ಬ್ರೊಡ್‌ಕಾಸ್ಟರ್ಸ್ ಫೆಡರೇಶನ್ ಮತ್ತು (IBF) ರಕ್ಷಣಾ ಇಲಾಖೆ ಜತೆಗೆ ಮಾತುಕತೆ ನಡೆಸಲಾಗಿದೆ.
ಅದರಂತೆ ಸ್ವಯಂ ಸೆನ್ಸಾರ್ ಮಾಡಿಕೊಳ್ಳಲು ಕರಡು ಪ್ರತಿಯೊಂದನ್ನು ಪ್ರಮುಖ ಮಾಧ್ಯಮಗಳಿಗೆ ಕಳಿಸಲಾಗಿದೆ. ಸೂಕ್ಷ್ಮ ವಿಷಯಗಳ ಮೇಲೆ ಸುದ್ದಿ ಕೇಂದ್ರಿಕರಿಸಿ ಪ್ರಸಾರ ಮಾಡುವಾಗ ನಿಗಾವಹಿಸಬೇಕೆಂದು ಹೇಳಲಾಗಿದೆ ಎಂದು ಸಚಿವ ಆನಂದ್ ಶರ್ಮಾ ತಿಳಿಸಿದರು. |