ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಎಲ್‌ಟಿಟಿಇ ವಿರುದ್ಧ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಹೇಳಿಕೆ ನೀಡಿದ್ದನ್ನು ಖಂಡಿಸಿ ಲೋಕಸಭೆಯಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ಸದಸ್ಯರು ಗದ್ದಲ ಎಬ್ಬಿಸಿದ ಪರಿಣಾಮ ಕಲಾಪವನ್ನು ಸ್ಪೀಕರ್ ಸೋಮನಾಥ್ ಚಟರ್ಜಿ 25 ನಿಮಿಷಗಳ ಕಾಲ ಮುಂದೂಡಿದರು.
ಮುಖರ್ಜಿ ಎಲ್‌ಟಿಟಿಇ ವಿರುದ್ದ ಹೇಳಿಕೆ ನೀಡುತ್ತಿದ್ದಂತೆಯೇ ಎಂಡಿಎಂಕೆ ಮತ್ತು ಪಿಎಂಕೆ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕೋಲಾಹಲ ಎಬ್ಬಿಸಿದರು. ಕಪ್ಪು ಶರ್ಟ್ ಧರಿಸಿದ್ದ ಪಕ್ಷದ ಸಂಸದರು, ಘೋಷಣೆಗಳನ್ನು ಕೂಗುತ್ತ ಸದನದ ಬಾವಿಯ ಸಮೀಪ ಆಗಮಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ ಪರಿಣಾಮ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಶ್ರೀಲಂಕಾ ಮೊದಲು ಎಲ್‌ಟಿಟಿಇ ವಿರುದ್ಧ ನಡೆಸುತ್ತಿರುವ ಕದನವನ್ನು ನಿಲ್ಲಿಸಲಿ, ಪ್ರಣಬ್ ಅವರು ನೀಡಿದ ಹೇಳಿಕೆ ನಮಗೆ ಸಮಾಧಾನ ತಂದಿಲ್ಲ ಎಂದು ಸಂಸದರು ಧ್ವನಿ ಏರಿಸಿ ಹೇಳಿದಾಗ ಸ್ಪೀಕರ್ ಕಲಾಪವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದರು.
ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಡೆಸುತ್ತಿರುವ ಘರ್ಷಣೆಯಿಂದಾಗಿ ತಮಿಳು ನಾಗರಿಕರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ. ಆ ನಿಟ್ಟಿನಲ್ಲಿ ಎಲ್‌ಟಿಟಿಇ ಮೊದಲು ಶಸ್ತ್ರಾಸ್ತ್ರವನ್ನು ಕೆಳಗಿಳಿಸಿ, ಕಳೆದ 23ವರ್ಷಗಳಿಂದ ನಡೆಸುತ್ತಿರುವ ರಕ್ತಪಾತಕ್ಕೆ ಅಂತ್ಯಹಾಡಿ ರಾಜಕೀಯ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದ್ದರು.
ಲೋಕಸಭೆಯಲ್ಲಿ ಇಂದು ಸ್ವಯಂಇಚ್ಚಿತ ಹೇಳಿಕೆ ನೀಡಿದ್ದ ಮುಖರ್ಜಿ, ಎಲ್‌ಟಿಟಿಇ ಶಸ್ತ್ರಾಸ್ತ್ರ ತ್ಯಜಿಸಿದಲ್ಲಿ ತಮಿಳು ನಾಗರಿಕರ ರಕ್ಷಣೆ ಸೇರಿದಂತೆ ಎಲ್‌ಟಿಟಿಇ ಸಮಸ್ಯೆ ಬಗೆಹರಿಸುವ ಬಗ್ಗೆ ಭಾರತ ಮಧ್ಯಸ್ಥಿಕೆ ವಹಿಸಲಿದೆ ಎಂದು ಹೇಳಿದರು.
|