ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ವಾದಕ್ಕೆ ಪುಷ್ಟಿಯಾಗಿ, ಬಿಜೆಪಿಯ ಕಟ್ಟಾ ವಿರೋಧಿ ಸಮಾಜವಾದಿ ಪಕ್ಷವು, ಕೇಸರಿ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುತ್ತಿಲ್ಲ! ಉತ್ತರ ಪ್ರದೇಶದಲ್ಲಿ ಬದ್ಧವಿರೋಧಿಯಾಗಿದ್ದ ಕಾಂಗ್ರೆಸ್ ಕೈ ಹಿಡಿದು, ಇದೀಗ ಕೈಕೈ ಹಿಸುಕಿಕೊಳ್ಳುತ್ತಿರುವ ಸಮಾಜವಾದಿ ಪಕ್ಷ, ಬಿಜೆಪಿ ಮೈತ್ರಿ ಪ್ರಸ್ತಾಪವೇನೂ ಹೊಸ ವಿಷಯವಲ್ಲ ಎಂದೂ ಹೇಳಿಕೊಂಡಿದೆ.
ಈ ಹೇಳಿಕೆಯು, ಕಾಂಗ್ರೆಸ್ಸನ್ನು ಹತಾಶೆಗೀಡಾಗುವಂತೆ ಮಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸಿಂಹಪಾಲು ಪಡೆಯಲು ಸಮಾಜವಾದಿ ಪಕ್ಷ ಮಾಡಿರುವ ಬ್ಲ್ಯಾಕ್ ಮೇಲ್ ತಂತ್ರವಿದು ಎಂದೂ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೇಸರಿ ಪಕ್ಷವು ಹಿಂದುತ್ವ ವಿಷಯಗಳನ್ನು ಕೈಬಿಟ್ಟರೆ ಅದರೊಂದಿಗೆ ಕೈಜೋಡಿಸುವುದಾಗಿ ಎಸ್ಪಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಬುಧವಾರ ನೀಡಿದ್ದ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭರ್ಜರಿ ಟೀಕಾ ಪ್ರಹಾರ ಕೇಳಿಬಂದಿತ್ತು. ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ತನ್ನ ತತ್ವ ಸಿದ್ಧಾಂತಗಳನ್ನೇ ಬಲಿಕೊಡುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, 'ಇದೇನೂ ಹೊಸದಲ್ಲ. ಬಿಜೆಪಿಯು ಮಂದಿರ ವಿಷಯ, ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬೇಡಿಕೆಗಳನ್ನು ಕೈಬಿಟ್ಟರೆ, ಜನ ಹಿತದ ಆಧಾರದ ಮೇಲೆ ಅದರ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಮಗೇನೂ ಅಡ್ಡಿಯಿಲ್ಲ ಎಂದು ನಾನು ಹೇಳುತ್ತಲೇ ಬಂದಿದ್ದೇನೆ' ಎಂದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆಗಳು ಮುರಿದುಬೀಳುವ ಹಂತದಲ್ಲಿ, ಉಭಯ ಪಕ್ಷಗಳ ಮಧ್ಯೆ ವಾದ-ಪ್ರತಿವಾದಗಳು ನಡೆಯುತ್ತಿರುವಂತೆಯೇ, ಸಮಾಜವಾದಿ ಪಕ್ಷವು ಬಿಜೆಪಿ ಜೊತೆ, ಅದರ ನಾಯಕರ ಜೊತೆ ಸಂಪರ್ಕದಲ್ಲಿದೆ ಎಂಬ ಗೊಂದಲಗಳ ಕುರಿತು ಪತ್ರಕರ್ತರು ಮುಲಾಯಂ ಅವರಲ್ಲಿ ಸ್ಪಷ್ಟನೆ ಕೇಳಿದಾಗ ಅವರು ಈ ವಿಷಯ ಹೇಳಿದರು.
ರಾಮ ಮಂದಿರ ವಿಷಯ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮತ್ತು ಏಕರೂಪ ನಾಗರಿಕ ಸಂಹಿತೆಯ ಬೇಡಿಕೆಗಳನ್ನು ಬಿಜೆಪಿ ಬದಿಗಿರಿಸಿದರೆ ಅದರೊಂದಿಗೆ ಕೈಜೋಡಿಸಲು ಸಿದ್ಧ ಎಂದು ನಾನು ಲೋಕಸಭೆಯಲ್ಲಿಯೂ, ಕೆಲವು ಸಮಯದ ಹಿಂದೆ ಬಿಜೆಪಿ ಮುಖಂಡ ಆಡ್ವಾಣಿ ಅವರೊಂದಿಗಿನ ಮಾತುಕತೆ ಸಂದರ್ಭದಲ್ಲೂ ಹೇಳಿರುವುದಾಗಿ ಮುಲಾಯಂ ತಿಳಿಸಿದರು.
ಈ ಮಧ್ಯೆ, ಮುಲಾಯಂ ಹೇಳಿಕೆಗಳನ್ನು 'ವದಂತಿ ಹಬ್ಬಿಸುವ ಹುನ್ನಾರ' ಎಂದು ಬಿಜೆಪಿ ತಳ್ಳಿ ಹಾಕಿದೆ. 'ಸಮಾಜವಾದಿ ಪಕ್ಷವನ್ನು ಬಿಜೆಪಿಯು ಮೈತ್ರಿಗೆ ಪರಿಗಣಿಸುವ ದೂರದ ಸಾಧ್ಯತೆಗಳೂ ಇಲ್ಲ' ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಪಕಾಲಿಕ ರಾಜಕೀಯ ದುರ್ಲಾಭಕ್ಕೆ ತತ್ವ ಸಿದ್ಧಾಂತವನ್ನು ಬಲಿಕೊಡುವ ಇತರ ಪಕ್ಷಗಳಂತೆ ನಮ್ಮದಲ್ಲ. ಅಯೋಧ್ಯೆ ವಿಷಯ ಕೈಬಿಡುವುದಿಲ್ಲ ಎಂದು ನಖ್ವಿ ಹೇಳಿದ್ದಾರೆ. |