ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಖಚಿತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಜನವರಿ 22ರಂದು ಅಜರುದ್ದೀನ್ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ, ವೀರಪ್ಪ ಮೊಯಿಲಿ ಮತ್ತು ಡಿ.ಶ್ರೀನಿವಾಸ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.
ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಜರುದ್ದೀನ್ ಅವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲಾಗುವುದು ಎಂದ ಅವರು, ಯಾವ ಕ್ಷೇತ್ರ ಎಂಬುದು ಇನ್ನೂ ನಿಗದಿಯಾಗಿಲ್ಲ ಎಂದರು.
ಅಜರುದ್ದೀನ್ ಅವರು ಷರತ್ತುರಹಿತರಾಗಿ ಪಕ್ಷವನ್ನು ಸೇರಿದ್ದಾರೆ. ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬುದು ಅವರ ಆಸೆಯಾಗಿದ್ದು, ತಾನು ಕಾಂಗ್ರೆಸ್ ಸೇರುವುದಾಗಿ ಇಚ್ಚೆ ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ತಾನು ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರಲ್ಲಿ ಚರ್ಚಿಸಿದಾಗ ಅಜರ್ ಸೇರ್ಪಡೆಗೆ ಗ್ರೀನ್ ಸಿಗ್ನಲ್ ದೊರೆತಿತ್ತು ಎಂದು ಮೊಯ್ಲಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. |