ಮಹಾರಾಷ್ಟ್ರದಿಂದ ಸುಮಾರು 100ಕಿ.ಮೀ.ದೂರದಲ್ಲಿರುವ ಶಿವನೇರಿ ಕೋಟೆಯಲ್ಲಿ ಛತ್ರಪತಿ ಶಿವಾಜಿ ಜನ್ಮದಿನಾಚರಣೆ ಸಮಾರಂಭಕ್ಕಾಗಿ ಮುಖ್ಯಮಂತ್ರಿ ಅಶೋಕ್ ಚವಾಣ್ ಹೆಲಿಕಾಪ್ಟರ್ ಇಲ್ಲಿಗೆ ಬಂದಿಳಿಯುತ್ತಿರುವ ಸಂದರ್ಭದಲ್ಲಿ ಮರಾಠ ಆರಕ್ಷಣ ಸಮಿತಿ ಸದಸ್ಯರು ಕಲ್ಲುತೂರಾಟ ನಡೆಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಸಿಎಂ ಅಶೋಕ್ ಚವಾಣ್ ಅವರ ಹೆಲಿಕಾಪ್ಟರ್ ಕೆಳಗಿಳಿಯುತ್ತಿದ್ದಂತೆಯೇ ಮರಾಠ ಆರಕ್ಷಣಾ ಸಮಿತಿ ಸದಸ್ಯರು ಕಲ್ಲುತೂರಾಟ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರು ಈ ಕೃತ್ಯ ಎಸಗಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದಾಗ ಘರ್ಷಣೆ ನಡೆದಿದ್ದು,ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆರ್.ಕದಂಬ ತಿಳಿಸಿದ್ದಾರೆ. ಘಟನೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಚವಾಣ್ ಅವರು ಹೆಲಿಕಾಪ್ಟರ್‌ನಲ್ಲಿ ಇದ್ದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
16ನೇ ಶತಮಾನದ ಮರಾಠ ರಾಜಾ ಛತ್ರಪತಿ ಶಿವಾಜಿಯ ಜನ್ಮದಿನಾಚರಣೆಯ ಅಂಗವಾಗಿ ಶಿವನೇರಿ ಕೋಟೆಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. |