ಚಾಂದ್ ಮಹಮದ್ ಯಾನೆ ಚಂದ್ರಮೋಹನ್ ಹಾಗೂ ಫಿಜಾ ಯಾನೆ ಅನುರಾಧಾ ಬಾಲಿ ಪ್ರಕರಣ ಗೊತ್ತಲ್ಲ. ಇಬ್ಬರೂ ಎರಡನೇ ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದರು. ಇದೀಗ ಎರಡನೇ ವಿವಾಹದ ಕಾನೂನಿನ ತೊಡಕುಗಳಿಂದ ಪಾರಾಗುವುದಕ್ಕೋಸ್ಕರ ಇಸ್ಲಾಂಗೆ ಮತಾಂತರಗೊಳ್ಳುವುದು 'ಇಸ್ಲಾಂ-ವಿರೋಧಿ' ಮತ್ತು 'ಸ್ವೀಕಾರಯೋಗ್ಯವಲ್ಲ' ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಘೋಷಿಸಿದ್ದಾರೆ.
ಎರಡನೇ ವಿವಾಹವಾಗುವುದಕ್ಕಾಗಿಯೇ ಮತಾಂತರಗೊಳ್ಳುವುದು ಒಪ್ಪತಕ್ಕದ್ದಲ್ಲ, ಇದು ಇಸ್ಲಾಂ-ವಿರೋಧಿ ಎಂದು ಖ್ಯಾತ ಮುಸ್ಲಿಂ ಧಾರ್ಮಿಕ ಪಂಡಿತ ಮೌಲಾನಾ ವಹೀದುದ್ದೀನ್ ಖಾನ್ ಹೇಳಿದ್ದಾರೆ.
ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ, ಮೂರು ಹದಿಹರೆಯದ ಮಕ್ಕಳ ತಂದೆ ಚಂದ್ರ ಮೋಹನ್ ಅವರು ಮಾಜಿ ಕಾನೂನು ಅಧಿಕಾರಿ, ವಿಧವೆ ಅನುರಾಧಾ ಬಾಲಿ ಜತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಎರಡನೇ ವಿವಾಹವಾಗಿ, ಈ ಕುರಿತ ಚರ್ಚೆಗೆ ನಾಂದಿ ಹಾಡಿದ್ದರು. (ಇದೀಗ ಅವರಿಬ್ಬರ ಸಂಬಂಧ ಒಡಕಿನಂಚಿನಲ್ಲಿದೆ.)
ಪ್ರವಾದಿ ಮಹಮದ್ ಅವರ ಬೋಧನೆಯನ್ನು ಹದಿತ್‌ನಿಂದ ಉಲ್ಲೇಖಿಸುತ್ತಾ ವಹೀದುದ್ದೀನ್ ಖಾನ್, ಇಂಥ ಮತಾಂತರಗಳು ಸ್ವೀಕಾರಯೋಗ್ಯವಲ್ಲ ಮತ್ತು 'ಮಕ್ಕಳಾಟದ್ದು' ಎಂದರು. ಸುಮಾರು 200 ಪುಸ್ತಕಗಳನ್ನು ಬರೆದಿರುವ ಮತ್ತು ಪವಿತ್ರ ಖುರಾನ್‌ನ ವ್ಯಾಖ್ಯಾನದ ಬಗ್ಗೆ ಅವರು ಅಧಿಕಾರಯುತವಾಗಿ ಮಾತನಾಡಬಲ್ಲರು.
'ಮತಾಂತರ ಎಂಬುದು ವಿವಾಹ ಅಥವಾ ಯಾವುದೇ ವೈಯಕ್ತಿಕ ಲಾಭದ ಉದ್ದೇಶಕ್ಕಾಗಿ ಇರಬಾರದು. ಮತಾಂತರ ಉದ್ದೇಶ ಸತ್ಯ ಶೋಧನೆಯಾಗಿರಬೇಕು. ಆಳವಾದ ಅಧ್ಯಯನ ಮತ್ತು ಧರ್ಮದ ಬಗ್ಗೆ ಚರ್ಚೆ ನಡೆಸುವುದರಿಂದ ಮಾತ್ರವೇ ಸತ್ಯ ಶೋಧನೆ ಮಾಡಬಹುದಾಗಿದೆ' ಎಂದು ಖಾನ್ ಹೇಳಿದ್ದಾರೆ.
ಇಂಥ ಮತಾಂತರಗಳ ತಡೆಗೆ, ವಿವಾಹ-ಬಂಧದ ಪಾವಿತ್ರ್ಯ ಮತ್ತು ಇದು ಮೋಜಿನಾಟವಲ್ಲ ಎಂಬ ಬಗ್ಗೆ ಜನರಲ್ಲಿ ಜಾಗೃತಿಯುಂಟು ಮಾಡಬೇಕಿದೆ ಎಂದು ದಾರುಲ್ ಉಲೂಂನ ಪಂಡಿತರೂ, ಉತ್ತರ ಪ್ರದೇಶದ ದೇವಬಂದ್ ಪ್ರದೇಶದಲ್ಲಿ ಅತ್ಯಂತ ಗೌರವ ಪಡೆದಿರುವ ನೇತಾರರೂ ಆಗಿರುವ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಚಾಂದ್ ವಿವಾಹದ ಬಗ್ಗೆ ಪ್ರಸ್ತಾಪಿಸಿದ ಮತ್ತೊಬ್ಬ ಮುಸ್ಲಿಂ ಮತ ಪಂಡಿತರಾದ ಖಾರಿ ಉಸ್ಮಾನ್, 'ಆತ (ಚಾಂದ್) ಮುಸ್ಲಿಂ ಆಗಿ ಪರಿವರ್ತನೆಗೊಂಡರೂ, ಇಡೀ ಪ್ರಕರಣಗಳ ಸರಣಿಯು, ಧರ್ಮದ ಬಗ್ಗೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವಂತಾಗಿದೆ' ಎಂದಿದ್ದಾರೆ.
ಮುಸ್ಲಿಮರ ವರಿಷ್ಠ ಮಂಡಳಿ ದಾರುಲ್ ಉಲೂಂನ ಫತ್ವಾ ವಿಭಾಗವಾಗಿರುವ ದಾರುಲ್ ಇಫ್ತಾ ಕೂಡ, ಚಾಂದ್ ಮದುವೆ-ಮತಾಂತರವನ್ನು 'ಕೀಳು ಮಟ್ಟದ ಕೃತ್ಯ' ಎಂದು ಖಂಡಿಸಿದೆ. |