ಮಾರ್ಚ್ 28ರಂದು ಭೂಮಿಗೆ ಒಂದು ಗಂಟೆ ವಿರಾಮ, ಅರ್ಥಾತ್ `ರೆಸ್ಟ್' ! ಅಂದರೆ ವಿಶ್ವದ ಪ್ರಮುಖ ನಗರಗಳು ಮಾರ್ಚ್ 28ರಂದು ರಾತ್ರಿ 8.30ರಿಂದ ಒಂದು ಗಂಟೆ ಕಾಲ ಎಲ್ಲ ವಿದ್ಯುದ್ದೀಪಗಳನ್ನು ಆರಿಸಿ ಕತ್ತಲೆಯಲ್ಲಿರುವುದು. ಹಾಗಾಗಿ ಮುಂಬಯಿ, ದೆಹಲಿಗಳಲ್ಲೂ ಆ ದಿನ ಸ್ವಿಚ್ ಆಫ್.
ವಿಶ್ವದಾದ್ಯಂತ 371 ನಗರಗಳು ಭೂಮಿಗೆ ರೆಸ್ಟ್ ನೀಡುವ ಸಾಂಕೇತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಇದನ್ನು `ಅರ್ಥ್ ಅವರ್' (ಭೂಮಿಯ ಸಮಯ) ಎಂದು ಕರೆಯಲಾಗುತ್ತಿದ್ದು, ಭೂಮಿಯನ್ನು ಉಳಿಸಲು ಸಾಂಕೇತಿಕವಾಗಿ ವಿಶ್ವಕ್ಕೆ ಸಂದೇಶ ನೀಡುವುದು ಇದರ ಉದ್ದೇಶ. ಹೆಚ್ಚಿನ ಶಕ್ತಿಯ ಬಳಕೆಯಿಂದ ಹಾಗೂ ಜಾಗತಿಕ ತಾಪಮಾನ, ಭೂಮಿಯ ಅಧಿಕ ಒತ್ತಡದಿಂದ ಭೂಮಿಯ ಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅದನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದು ಎಂಬುದೇ ಈ ಅರ್ಥ್ ಅವರ್ ಕಾರ್ಯಕ್ರಮದ ಪ್ರಮುಖ ಗುರಿ.
ವಿಶ್ವದಲ್ಲಿ ಅತಿ ಹೆಚ್ಚು ಶಕ್ತಿಯನ್ನು ಬಳಸುವ ನಗರಗಳ ಪೈಕಿ ಭಾರತದ ದೆಹಲಿ, ಮುಂಬೈಗಳೂ ಈ ಕಾರ್ಯಕ್ರಮದ ಭಾಗಿಗಳು. ಕಳೆದ ವರ್ಷವೂ ಇಂತಹ ಕಾರ್ಯಕ್ರಮವನ್ನು ಪ್ರಮುಖ ನಗರಗಳು ಹಮ್ಮಿಕೊಂಡಿದ್ದವು. ಡಬ್ಲ್ಯುಡಬ್ಲ್ಯುಎಫ್ ಇಂಟರ್‌ನ್ಯಾಷನಲ್ ಸಂಸ್ಥೆ ನೇತೃತ್ವದಲ್ಲಿ ನಡೆವ ಈ ಸಾಂಕೇತಿಕ ಆಚರಣೆ ಅತಿ ವೇಗವಾಗಿ ಹಾಗೂ ಸುಲಭವಾಗಿ ಇದರ ಉದ್ದೇಶವನ್ನು ಜನರಿಗೆ ತಲುಪಿಸುವ ವಾಹಕವಾಗಿ ಕೆಲಸ ಮಾಡಿವೆ. ಪ್ರಪಂಚದ 37 ದೇಶಗಳ ರಾಜಧಾನಿಗಳಲ್ಲದೆ, ಇತರ ಪ್ರಮುಖ ನಗರಗಳಾದ ಲಂಡನ್, ಪ್ಯಾರಿಸ್, ಬೀಜಿಂಗ್, ರೋಮ್, ಮಾಸ್ಕೋ, ಲಾಸ್ ಏಂಜಲೀಸ್, ಹಾಂಕಾಂಗ್, ದುಬೈ, ಸಿಂಗಾಪುರ, ಅಥೆನ್ಸ್, ಟೊರಂಟೋ, ಸಿಡ್ನಿ, ಮೆಕ್ಸಿಕೋ, ಇಸ್ತಾಂಬುಲ್, ಕಾಪನ್‌ಹ್ಯಾಗನ್, ರಿಯೋ ದಿ ಜನೆರಿಯೋ, ಮೇನಿಲಾ, ಬ್ಯೂನಸ್ ಏರ್ಸ್, ಬ್ರೂಸೆಲ್ಸ್, ಕೇಪ್ ಟೌನ್, ಹೆಲ್ಸಿಂಕಿ, ದೆಹಲಿ ಹಾಗೂ ಮುಂಬೈಗಳು ಸೇರಿವೆ.
|