ಎಲ್ಟಿಟಿಇ ವಿರುದ್ದ ನಿಲುವು ತಳೆದಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿಯನ್ನು ಬಂಧಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸುವ ಮೂಲಕ ಹೊತ್ತಿಕೊಂಡ ಘರ್ಷಣೆಯ ಕಿಡಿಯಿಂದಾಗಿ ಮದ್ರಾಸ್ ಹೈಕೋರ್ಟ್ ರಣರಂಗವಾಗಿ ಮಾರ್ಪಟ್ಟ ಘಟನೆ ಗುರುವಾರ ನಡೆದಿದೆ.ಪ್ರತಿಭಟನಾ ನಿರತ ವಕೀಲರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿದ್ದಂತೆಯೇ ಆಕ್ರೋಶಿತಗೊಂಡ ವಕೀಲರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ನ್ಯಾಯಾಲಯದ ಆವರಣದಲ್ಲಿರುವ ಪೊಲೀಸ್ ಠಾಣೆಗೆ ಬೆಂಕಿ, ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸುವ ಮೂಲಕ ಮದ್ರಾಸ್ ಹೈಕೋರ್ಟ್ ಆವರಣ ಅಕ್ಷರಶಃ ರಣರಂಗವಾಗಿತ್ತು. ಘರ್ಷಣೆಯಲ್ಲಿ ಹಲವು ವಕೀಲರು ಹಾಗೂ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಕಾರು, ಸ್ಕೂಟರ್‌ಗಳನ್ನು ಜಖಂಗೊಳಿಸಲಾಗಿದ್ದು, ಪತ್ರಕರ್ತರ ಮೇಲೆಯೂ ಹಲ್ಲೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮತ್ತಷ್ಟು ಪೊಲೀಸ್ ಪಡೆಯನ್ನು ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಘಟನೆ ಕುರಿತಂತೆ ಮೂರು ಮಂದಿ ವಕೀಲರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರವಷ್ಟೇ ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೆ ವಕೀಲರ ಗುಂಪೊಂದು ಸೇರಿ ಮದ್ರಾಸ್ ಹೈಕೋರ್ಟ್ ನ್ಯಾಯಾಲಯದ ಆವರಣದಲ್ಲೇ ಥಳಿಸಿತ್ತು.ನ್ಯಾಯಮೂರ್ತಿಗಳಾದ ಪಿ.ಕೆ.ಮಿಶ್ರಾ ಮತ್ತು ಕೆ.ಚಂದ್ರು ಅವರ ನ್ಯಾಯಾಪೀಠದ ಆವರಣದೊಳಗೆ ನುಗ್ಗಿದ 'ಕಾನೂನು ಪಾಲಕ' ವಕೀಲರ ದಂಡೊಂದು, ಎಲ್ಟಿಟಿಇ ಪರವಾಗಿ ಘೋಷಣೆ ಕೂಗುತ್ತಾ ಸುಬ್ರಹ್ಮಣ್ಯಂ ಸ್ವಾಮಿ ಅವರ ಮೇಲೇರಿ ಕೋಳಿಮೊಟ್ಟೆಯನ್ನು ತೂರಿ ಹಲ್ಲೆ ನಡೆಸಿತ್ತು.ಶ್ರೀಲಂಕಾದಲ್ಲಿ ತಮಿಳರ ಮೇಲೆ 'ದೌರ್ಜನ್ಯ' ನಡೆಯುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ವಾರಗಳಿಂದ ತಮಿಳುನಾಡಿನ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದರು. |