ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸಾಂಸ್ಥಿಕ ಮಟ್ಟದಲ್ಲಿ ಭಾರಿ ಬದಲಾವಣೆಯಾಗಿದ್ದು, ರಾಜ್ಯದ ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ)ಗೆ ಸೇರಿಸಿಕೊಳ್ಳಲಾಗಿದ್ದರೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮರಳಿರುವ ಗುಲಾಂ ನಬೀ ಆಜಾದ್, ಕರ್ನಾಟಕದಲ್ಲಿ ಕಾಂಗ್ರೆಸ್‌ನ ಉಸ್ತುವಾರಿಗೆ ಮರಳುತ್ತಿದ್ದಾರೆ.
ಗುರುವಾರ ರಾತ್ರಿ ಕಾಂಗ್ರೆಸ್‌ನ ಪರಮೋಚ್ಚ ನೀತಿ ರೂಪಣಾ ಸಂಸ್ಥೆ ಸಿಡಬ್ಲ್ಯುಸಿಯಲ್ಲಿ ನಡೆದ ದಿಢೀರ್ ಬದಲಾವಣೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಆಜಾದ್ ಅವರಿಗೆ ಕರ್ನಾಟಕ, ತಮಿಳುನಾಡು, ಒರಿಸ್ಸಾ ಮತ್ತು ಪುದುಚೇರಿಯ ಹೊಣೆ ವಹಿಸಲಾಗಿದೆ.
ವಿ.ಕಿಶೋರ್ ಚಂದ್ರ ದೇವ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇಳಿಸಲಾಗಿದ್ದು, ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್‌ಯುಐ)ದ ಹೊಣೆಯಲ್ಲಿ ಮುಂದುವರಿಯಲಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ಉತ್ತರ ಪ್ರದೇಶದ ಹೊಣೆ ಮುಂದುವರಿಸಲಿದ್ದು, ಪಕ್ಷದ ಪ್ರಚಾರ ವಿಭಾಗದ ಜವಾಬ್ದಾರಿಯೂ ಅವರ ಮೇಲಿದೆ.
ಇದುವರೆಗೆ ಕರ್ನಾಟಕದ ಉಸ್ತುವಾರಿ ವಹಿಸಿದ್ದ ಪೃಥ್ವಿರಾಜ್ ಚೌಹಾಣ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಜಮ್ಮು ಮತ್ತು ಕಾಶ್ಮೀರದೊಂದಿಗೆ ಹರ್ಯಾಣದ ಹೊಣೆಯನ್ನೂ ಹೊರಲಿದ್ದಾರೆ. |