ಸುಮಾರು 13ವರ್ಷಗಳ ಹಿಂದಿನ ಅಕ್ರಮ ಸಂಪತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಂಪರ್ಕ ಮಾಧ್ಯಮ ಸಚಿವ ಸುಖ್‌ರಾಮ್ ದೋಷಿ ಎಂದು ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ಪ್ರಕರಣ ಬಗ್ಗೆ ನ್ಯಾಯಾಲಯ ಸುಖ್‌ರಾಮ್ ಅವರ ಶಿಕ್ಷೆಯ ಪ್ರಮಾಣವನ್ನು ಫೆ.24ರಂದು ಘೋಷಿಸುವುದಾಗಿ ನ್ಯಾಯಪೀಠ ತಿಳಿಸಿದೆ. 1991ರಿಂದ 1996ರವರೆಗೆ ಸುಖ್‌ರಾಮ್ ಅವರು ಚರ ಮತ್ತು ಸ್ಥಿರಾಸ್ತಿಗಳು ಸೇರಿದಂತೆ ಅಕ್ರಮವಾಗಿ ಸುಮಾರು 5.35ಕೋಟಿ ಅಕ್ರಮ ಸಂಪತ್ತು ಹೊಂದಿದ್ದಾರೆಂದು ಸಿಬಿಐ ಆರೋಪಿಸಿತ್ತು.
ಜನಪ್ರತಿನಿಧಿಯಾಗಿದ್ದ ಸುಖ್‌ರಾಮ್ ಅವರು 1991ರ ಜೂನ್ 20ರಿಂದ 1996ರ ಆಗೋಸ್ಟ್ 16ರವರೆಗೆ ಭ್ರಷ್ಟಾಚಾರ ಮತ್ತು ಕಾನೂನು ಬಾಹಿರವಾಗಿ ಕೌಸಂಬಿ, ಗಾಜಿಯಾಬಾದ್‌ಗಳಲ್ಲಿ ಐಶಾರಾಮಿ ಫಾರ್ಮ್ ಹೌಸ್‌ಗಳನ್ನು ಕಟ್ಟಿಸಿದ್ದರು, ಬ್ಯಾಂಕ್ ಬ್ಯಾಲೆನ್ಸ್, ಆಭರಣಗಳನ್ನು ಅಕ್ರಮವಾಗಿ ಸಂಪಾದಿಸಿದ್ದರು ಎಂದು ಈ ಮೊದಲೇ ಸರ್ಕಾರಿ ವಿಶೇಷ ವಕೀಲರಾದ ಗುರ್ಡಿಯಲ್ ಸಿಂಗ್ ಮತ್ತು ವಕೀಲ ಕೆ.ಕೆ.ಪಾತ್ರಾ ಅವರು ನ್ಯಾಯಾಲದಲ್ಲಿ ಆರೋಪಿಸಿದ್ದರು.
ಆದರೆ ಆರೋಪಿ ಪರ ಹಿರಿಯ ವಕೀಲರಾದ ಕೆಟಿಎಸ್ ತುಳಸಿ ಅವರು, ಪ್ರತಿವಾದಿಗಳ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದು, ತನ್ನ ಕಕ್ಷಿದಾರರ ಮೇಲೆ ರಾಜಕೀಯ ದ್ವೇಷದಿಂದ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಂದಾಗಿ ಬಲಿಪಶುವನ್ನಾಗಿ ಮಾಡಿದ್ದಾರೆ ಎಂದು ವಾದಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ 1996 ಆಗೋಸ್ಟ್ 27ರಂದು ಮಾಜಿ ಸಚಿವ ಸುಖ್‌ರಾಮ್ ವಿರುದ್ಧ ದೂರನ್ನು ದಾಖಲಿಸಿದ್ದು, 1997 ಜೂನ್ 9ರಂದು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ ಸಿಬಿಐ 1996ರಲ್ಲಿ ಮಾಜಿ ಸಚಿವರ ಹಿಮಾಚಲ ಪ್ರದೇಶದಲ್ಲಿನ ಮಾಂಡಿಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 3.62ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿತ್ತು. |