ಡಿಎಂಕೆ ಜತೆಗಿನ ಮೈತ್ರಿ ಕಡಿದುಕೊಳ್ಳುವ ಯಾವ ಯೋಚನೆಯೂ ಇಲ್ಲ ಮತ್ತು ಎಐಎಡಿಎಂಕೆ ಜೊತೆ ಕೈಜೋಡಿಸುವ ಬಗ್ಗೆ ಇದುವರೆಗೆ ಯೋಚಿಸಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿರುವುದರೊಂದಿಗೆ, ಮೈತ್ರಿ ಬಗ್ಗೆ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.
'ಇವತ್ತಿನ ವರೆಗೂ, ನಾವು ಜಯಲಲಿತಾ ಸೇರಿದಂತೆ ಯಾವುದೇ ಪಕ್ಷ ಅಥವಾ ಯಾವುದೇ ರಂಗ ಸೇರುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಡಿಎಂಕೆ ಜೊತೆ ನಮ್ಮ ಮಿತ್ರತ್ವ ಬಲವಾಗಿಯೇ ಇದೆ. ಯುಪಿಎ ಮಿತ್ರಪಕ್ಷಗಳೊಂದಿಗಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ' ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಎಂ.ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ತೊರೆದು ನಮ್ಮೊಂದಿಗೆ ಬಂದರೆ ಕಾಂಗ್ರೆಸ್ ಉದ್ಧಾರವಾಗುತ್ತದೆ ಎಂದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಗುರುವಾರ ಕರೆ ನೀಡಿದ್ದರು. |