ವಾಯುವ್ಯ ಮುಂಬಯಿಯ ಕಾಂದೀವಲಿ ಉಪನಗರದಲ್ಲಿ ಗುರುವಾರ ಪೊಲೀಸರು ನಡೆಸಿದ ಶೂಟೌಟ್‌ನಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಹೇಮಂತ್ ಪೂಜಾರಿಯ ಸಹಚರ ಭುಜಂಗಣ್ಣ ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೈ ಬ್ರಾಂಚ್ ಹನ್ನೊಂದನೇ ವಲಯದ ಪೊಲೀಸರು ಮುಂಬೈ ಉಪನಗರ ಕಾಂದೀವಲಿಯ ಚಿಕುವಾಡಿ ಪ್ರದೇಶದಲ್ಲಿ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ರೌಡಿ ಹೇಮಂತ್ ಪೂಜಾರಿಯ ಅಂಗರಕ್ಷಕರಾದ ಸುಭಾಷ್ ಶೆಟ್ಟಿ ಯಾನೆ ಭುಜಂಗಣ್ಣ ಎಂಬಾತನನ್ನು ಗುಂಡಿಕ್ಕಿ ಹತ್ಯಗೈಯಲಾಗಿದೆ ಎಂದು ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮರಿಯ ತಿಳಿಸಿದ್ದಾರೆ.
ರೌಡಿ ಹೇಮಂತ್ ಪೂಜಾರಿಯ ಪ್ರಮುಖ ಸಹಚರನಾದ ಶೆಟ್ಟಿಯನ್ನು ಚಿಕುವಾಡಿ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಶರಣಾಗತನಾಗುವಂತೆ ಸೂಚಿಸಿದ್ದು, ಇದನ್ನು ಲೆಕ್ಕಿಸದ ಶೆಟ್ಟಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಶೆಟ್ಟಿ ಹತ್ಯೆಗೀಡಾದ ಎಂದು ಪೊಲೀಸಧಿಕಾರಿ ತಿಳಿಸಿದ್ದಾರೆ.
ಹಲವಾರು ಅಪರಾಧ ಪ್ರಕರಣಗಳಲ್ಲಿ ಶೆಟ್ಟಿ ಭಾಗಿಯಾಗಿದ್ದಾನೆ. ಆತನಿಂದ ಎರಡು ಪಿಸ್ತೂಲ್ ಸಹಿತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
|