ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಗುರುವಾರ ನಡೆದ ಪೊಲೀಸ್ ಮತ್ತು ವಕೀಲರ ನಡುವಿನ ಮಾರಾಮಾರಿ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ 150ಮಂದಿಯನ್ನು ಬಂಧಿಸಿದ್ದಾರೆ.
ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪಿತ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುಂತೆ ಇಂದು ತಮಿಳುನಾಡು ಬಾರ್ ಅಸೋಸಿಯೇಶನ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ತನಿಖೆಯನ್ನು ತಮಿಳುನಾಡು ಸರ್ಕಾರ ಈಗಾಗಲೇ ಸಿಬಿಐಗೆ ಒಪ್ಪಿಸಿದೆ. ಆ ನಿಟ್ಟಿನಲ್ಲಿ ತನಿಖೆ ಮುಗಿಯುವವರೆಗೆ ಯಾವುದೇ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಯಾವಾಗ ಕಾನೂನು ಹತೋಟಿ ಮೀರಿ ಹೋಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ಕ್ರಮ ಕೈಗೊಳ್ಳುವುದು ಇಲಾಖೆಯ ಕರ್ತವ್ಯ, ನಾವು ನ್ಯಾಯಾಲಯಕ್ಕೆ ರಕ್ಷಣೆ ನೀಡಬೇಕಾಗಿದ್ದು ಅಗತ್ಯ, ಅಲ್ಲದೇ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ ಎಂದು ಖಾಸಗಿ ಟಿವಿ ಚಾನೆಲ್‌ವೊಂದರ ಜತೆ ಡಿಜಿಪಿ ಮಾತನಾಡುತ್ತ ತಿಳಿಸಿದ್ದಾರೆ.
ಎಲ್‌ಟಿಟಿಇ ವಿರೋಧಿ ನಿಲುವು ಹೊಂದಿದ್ದ ಜನತಾಪಕ್ಷದ ಸುಬ್ರಹ್ಮಣ್ಯಂ ಸ್ವಾಮಿ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರನ್ನು ಬಂಧಿಸಲು ನಿನ್ನೆ ಪೊಲೀಸರು ನ್ಯಾಯಾಲಯದ ಆವರಣಕ್ಕೆ ತೆರಳಿದ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಇಡೀ ಕೋರ್ಟ್ ಆವರಣ ರಣರಂಗವಾಗಿ ಮಾರ್ಪಟ್ಟಿತ್ತು.
ಘರ್ಷಣೆಯಲ್ಲಿ ನ್ಯಾಯಾಧೀಶರು, ಪೊಲೀಸರು, ವಕೀಲರು ಹಾಗೂ ಪತ್ರಕರ್ತರು ಗಾಯಗೊಂಡಿದ್ದಲ್ಲದೆ, ಕೋರ್ಟ್ ಆವರಣದಲ್ಲೇ ಇದ್ದ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿತ್ತು. |