"ಸದನದಲ್ಲಿ ಈ ರೀತಿ ಗದ್ದಲ ಮಾಡುವ ನಿಮಗೆ ಸರಕಾರದಿಂದ ನಯಾ ಪೈಸೆ ಪಡೆಯುವ ಹಕ್ಕಿಲ್ಲ, ಕಲಾಪಕ್ಕೆ ಅಡ್ಡಿಪಡಿಸುವ ನೀವೆಲ್ಲ ಮುಂದಿನ ಚುನಾವಣೆಯಲ್ಲಿ ಸೋಲನ್ನಪ್ಪಿದರೆ ಒಳ್ಳೆಯದು" ಎಂದು ಗುರುವಾರ ಸಂಸದರನ್ನು ಶಪಿಸಿದ್ದ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ಶುಕ್ರವಾರ ತಮ್ಮ ಹೇಳಿಕೆಗಳಿಗೆ ವಿಷಾದಿಸಿದ್ದು, 'ಹತಾಶೆ'ಯಿಂದ ಈ ರೀತಿ ಬೈದಿರುವುದಾಗಿ ಹೇಳಿದ್ದಾರೆ.
ಸಂಸತ್ಸದಸ್ಯರ ವರ್ತನೆ ವಿರುದ್ಧ ಆಗಾಗ್ಗೆ ಕೆರಳುತ್ತಿದ್ದ ಸಿಪಿಎಂ ಮುಖಂಡ ಚಟರ್ಜಿ ಶುಕ್ರವಾರ ಎಲ್ಲ ಸದಸ್ಯರಿಗೆ ಮುಂದಿನ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಶುಭ ಹಾರೈಸಲೂ ಮರೆಯಲಿಲ್ಲ.
'ಸ್ವಲ್ಪ ಹತಾಶೆಯಿಂದ ನಾನು ನಿನ್ನೆ ಏನೋ ಹೇಳಿದೆ. ಕೋಪಿಸಿಕೊಳ್ಳಬೇಡಿ. ಜನರು ಬೆಂಬಲಿಸಿದರೆ, ನಿಮ್ಮನ್ನೆಲ್ಲಾ ಮತ್ತೆ ಇಲ್ಲಿ ನೋಡಬೇಕೆಂಬುದು ನನ್ನ ಇಚ್ಛೆ' ಎಂದು ಚಟರ್ಜಿ ಹೇಳಿದರು.
ಗುರುವಾರ ಸದನದ ವೇದಿಕೆ ಮುಂಭಾಗಕ್ಕೆ ನುಗ್ಗಿ ಗಲಾಟೆ ಮಾಡುತ್ತಿದ್ದ ಬಿಎಸ್ಪಿ, ಬಿಜೆಪಿ, ಟಿಡಿಪಿ, ಆರ್‌ಪಿಐ, ಪಿಎಂಕೆ ಮತ್ತು ಎಂಡಿಎಂಕೆ ಸದಸ್ಯರ ವರ್ತನೆಯಿಂದ ಚಟರ್ಜಿ ಕೆರಳಿ ಕೆಂಡವಾಗಿದ್ದರು. 'ನೀವೆಲ್ಲಾ ಚುನಾವಣೆಯಲ್ಲಿ ಸೋತು ಹೋದರೆ ಒಳ್ಳೆಯದು. ಜನತೆ ತಮ್ಮ ತೀರ್ಪನ್ನು ಸರಿಯಾಗಿಯೇ ನೀಡಲಿ. ನಿಮಗೊಂದು ಪಾಠ ಆಗಲೇಬೇಕು' ಎಂದಿದ್ದರು.
ಶುಕ್ರವಾರ ಸದನ ಆರಂಭವಾದಾಗ, ಆರ್‌ಜೆಡಿಯ ರಾಮಕೃಪಾಲ್ ಯಾದವ್ ಅವರು, 'ನೀವು ನಿನ್ನೆ ಸದಸ್ಯರು ಮತ್ತೆ ಚುನಾಯಿತರಾಗದಂತೆ ಶಪಿಸಿದ್ದೀರಿ. ಅವರನ್ನೆಲ್ಲಾ ಕ್ಷಮಿಸುವ ಮೂಲಕ ನೀವು ಈ ಶಾಪವನ್ನು ಹಿಂತೆಗೆದುಕೊಳ್ಳಬೇಕು' ಎಂದು ಸೌಜನ್ಯದಿಂದ ವಿನಂತಿಸಿಕೊಂಡರು. ಯಾದವ್ ಮನವಿಗೆ ಹಲವು ಸದಸ್ಯರು ಬೆಂಬಲ ಸೂಚಿಸಿದರು.
ಗದ್ದಲ ಮಾಡುತ್ತಿದ್ದ ಸದಸ್ಯರಿಗೆ ತಾನು ಆ ರೀತಿ ಹೇಳಿರುವುದಾಗಿ ಸ್ಪಷ್ಟಪಡಿಸಿದ ಚಟರ್ಜಿ, ಅವರು ಸರಿಯಾಗಿ ವರ್ತಿಸಿದರೆ ಅವರನ್ನು ಕ್ಷಮಿಸಲು ಸಿದ್ಧ ಎಂದರು. |