ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯ ಗುತ್ತಿಗೆ ಅವ್ಯವಹಾರದ ಆರೋಪವನ್ನು ರಾಜ್ಯ ಲೋಕಾಯುಕ್ತ ತನಿಖೆಗೆ ವಹಿಸಿದ್ದ ಉಚ್ಚನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ.ಈ ಸಂಬಂಧ ವ್ಯಾಜ್ಯದ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟು ತಮ್ಮ ಅಹವಾಲನ್ನೂ ಆಲಿಸಬೇಕೆಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕೋರಿಕೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿ, ಗೌಡರಿಗೆ ನೋಟಿಸ್ ನೀಡಲು ಆದೇಶ ನೀಡಿದ್ದು ಮತ್ತೊಂದು ಮಹತ್ವದ ಬೆಳವಣಿಗೆ.ಕಾರಿಡಾರ್ ವ್ಯಾಜ್ಯ ಕುರಿತು 2006ರಲ್ಲಿ ಸರ್ವೋಚ್ಚನ್ಯಾಯಾಲಯ ನೀಡಿದ್ದ ತೀರ್ಪಿನ ನಂತರ ಇನ್ನು ಗೌಡರ ಆಪಾದನೆಗಳಿಗೆ ಅಪೀಲೇ ಇಲ್ಲೆ ಎಂಬಂತಹ ಸ್ಥಿತಿ ಏರ್ಪಟ್ಟಿತ್ತು. ಛಲಬಿಡದ ಗೌಡರು ಇದೀಗ ಮತ್ತೆ ನೈಸ್ ಕಾನೂನು ಸಮರದೊಳಕ್ಕೆ ಖುದ್ದು ಪ್ರವೇಶ ಮಾಡಿದಂತಾಗಿದೆ.ನೈಸ್ ಕಾರಿಡಾರ್ ಗುತ್ತಿಗೆ ವಿಷಯದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆಪಾದಿಸಿ ದೇವೇಗೌಡರು ನ್ಯಾಯಾಧೀಶರಿಗೆ ಪತ್ರ ಮತ್ತು ಪುಸ್ತಕ ಕಳಿಸಿದ್ದ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದ್ದರೂ ಅವುಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ರಾಜ್ಯ ಉಚ್ಚನ್ಯಾಯಾಲಯ ಪರಿಗಣಿಸಿ ಲೋಕಾಯುಕ್ತ ತನಿಖೆಗೆ ಆದೇಶ ನೀಡಿತ್ತು.ರಾಜ್ಯ ಉಚ್ಚನ್ಯಾಯಾಲಯದ ಈ ಕ್ರಮವನ್ನು ಗುತ್ತಿಗೆದಾರ ಸಂಸ್ಥೆ ನೈಸ್ ಸರ್ವೋಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ದೇವೇಗೌಡರ ಆಕ್ಷೇಪದ ನಂತರ ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರು ಈ ವಿಚಾರಣೆಯಿಂದ ಹಿಂದೆ ಸರಿದ ಪ್ರಕರಣ ಇಲ್ಲಿ ಸ್ಮರಿಸಿಕೊಳ್ಳಬಹುದು. |