ಜನತಾಪಕ್ಷದ ವರಿಷ್ಠ ಸುಬ್ರಹ್ಮಣ್ಯಂಸ್ವಾಮಿ ಬಂಧನಕ್ಕೆ ಆಗ್ರಹಿಸಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಶಾಂತಿ ಭಂಗ ಮಾಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಶುಕ್ರವಾರ ರಾತ್ರಿ ಆದೇಶ ಹೊರಡಿಸಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಂಡಲ್ಲಿ-ಗುಂಡಿಕ್ಕಲು ಆದೇಶ ಹೊರಡಿಸಿರುವುದಾಗಿ ಡಿಜಿಪಿ ಕಚೇರಿಯ ಮೂಲಗಳು ತಿಳಿಸಿವೆ.
ಕಾನೂನು ಬಾಹಿರವಾಗಿ ಯಾರು ಸಾರ್ವಜನಿಕರ ಆಸ್ತಿ, ವಾಹನಗಳನ್ನು ನಷ್ಟಮಾಡುತ್ತಾರೋ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಗುರುವಾರ ಮದ್ರಾಸ್ ಹೈಕೋರ್ಟ್ ಆವರಣ ರಣರಂಗವಾಗುವ ಮೂಲಕ ನ್ಯಾಯಾಧೀಶರು, ಪತ್ರಕರ್ತರು, ವಕೀಲರು ಗಾಯಗೊಂಡಿದ್ದು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಆದರೆ ಶುಕ್ರವಾರ ಮತ್ತೆ ಪ್ರತಿಭಟನೆಗೆ ಇಳಿದಿದ್ದ ವಕೀಲರು ಹಿಂಸಾಚಾರ ನಡೆಸಿ, ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚುವ ಮೂಲಕ ಘರ್ಷಣೆ ಭುಗಿಲೆದ್ದಿತ್ತು. |