ಕೇರಳ ಕೆಥೋಲಿಕ್ ಚರ್ಚ್‌ಗಳಲ್ಲಿ ನಡೆಯುತ್ತಿರುವ ರಹಸ್ಯ ಕೆಲಸಗಳು ಮತ್ತೊಮ್ಮೆ ಬಯಲಾಗತೊಡಗಿದ್ದು, ಚರ್ಚ್‌ಗಳಲ್ಲಿ ಮಾನಸಿಕ ಮತ್ತು ಲೈಂಗಿಕ ಹಿಂಸೆ ನೀಡಲಾಗುತ್ತದೆ ಎಂದು ಮಾಜಿ ಕ್ರೈಸ್ತ್ ಸನ್ಯಾಸಿನಿ ಜಾಸ್ಮೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆಯುವ ಮೂಲಕ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
52 ವರ್ಷ ಜಾಸ್ಮೆ, ಕೆಥೋಲಿಕ್ ಚರ್ಚ್ ಅಧೀನದ ಮದರ್ ಆಫ್ ಕಾರ್ಮೆಲ್ ಸಮೂಹ ಮತ್ತು ತ್ರಿಶೂರಿನ ಸೇಂಟ್ ಮೇರೀಸ್ ಕಾಲೇಜಿನ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಿರುಕುಳ ತಾಳಲಾರದೇ ಕಳೆದ ವರ್ಷ ನೌಕರಿ ಬಿಟ್ಟಿದ್ದರು. ಇದೀಗ ಅವರು 'ಅಮೆನ್-ಒರು ಕನ್ಯಾಸ್ತ್ರೀಯುಡೆ ಆತ್ಮಕಥಾ' (ಸನ್ಯಾಸಿನಿಯೊಬ್ಬಳ ಆತ್ಮಕಥೆ) ಪುಸ್ತಕ ಬರೆದಿದ್ದಾರೆ.
ಈ ಪುಸ್ತಕದಲ್ಲಿ ಜಾಸ್ಮೆ ಅವರು, ಸನ್ಯಾಸಿನಿಯರಿಗೆ ಪಾದ್ರಿಗಳು ನೀಡಿದ ಲೈಂಗಿಕ ಕಿರುಕುಳ, ಕ್ರೈಸ್ತ ಕೇಂದ್ರಗಳಲ್ಲಿ ನಡೆಯುವ ಸಲಿಂಗರತಿ ಮುಂತಾದವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
33ವರ್ಷಗಳ ದೌರ್ಜನ್ಯವನ್ನು 180ಪುಟಗಳಲ್ಲಿ ಸಂಪೂರ್ಣವಾಗಿ ಬಿಚ್ಚಿಡಲಾಗದು, ಆದರೂ ಸಾಕಷ್ಟು ಮಾಹಿತಿ ನೀಡಿದ್ದೇನೆ ಎಂದು ಜಸ್ಸೆ ಹೇಳಿಕೊಂಡಿದ್ದಾರೆ.
ಅಗ್ಗದ ಪ್ರಚಾರಕ್ಕಾಗಿ ಮತ್ತು ಕ್ರೈಸ್ತ ಸಂಸ್ಥೆಗಳ ಹೆಸರಿಗೆ ಮಸಿ ಬಳಿಯಲು ಈ ಪುಸ್ತಕ ಬರೆದಿದ್ದಾಗಿ ಕೆಲವರು ಆರೋಪಿಸುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ತಾವು ಏನು ನಡೆದಿದೆಯೋ ಅದನ್ನು ಯಥಾವತ್ತಾಗಿ ಬಿಂಬಿಸಲು ಯತ್ನಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. |