ಉತ್ತರಪ್ರದೇಶದ ಹರ್ತಾಸ್ ನ್ಯಾಯಾಲಯಕ್ಕೆ ಪೊಲೀಸರು ಕರೆತರುತ್ತಿದ್ದ ಇಬ್ಬರು ವಿಚಾರಣಾಧೀನ ಕೈದಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ ಪರಿಣಾಮ ಇಬ್ಬರು ಕೈದಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ತಮಿಳುನಾಡಿನ ಹೈಕೋರ್ಟ್ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ನಡುವಿನ ಮಾರಾಮಾರಿ ಘಟನೆ ನಡೆದ ಬೆನ್ನಲ್ಲೇ, ಯುಪಿಯ ನ್ಯಾಯಾಲಯ ಆವರಣದಲ್ಲಿ ಕೈದಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆಗೈದ ಘಟನೆ ನಡೆದಿದ್ದು ಆತಂಕದ ವಾತಾವರಣ ಮೂಡಿಸಿದೆ.
ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಪ್ರತಿದಾಳಿಗೆ ಮೂರು ದುಷ್ಕರ್ಮಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಇಬ್ಬರು ಕೈದಿಗಳನ್ನು ಬೆಳಿಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜೆಪಿ ಸಿಂಗ್ ವಿವರಿಸಿದ್ದಾರೆ.
ಬಂದೂಕುಧಾರಿ ಮೂರು ಮಂದಿ ಆಗಂತುಕರು ಗುಂಡಿನ ದಾಳಿ ಮುಂದುವರಿಸಿದಾಗ, ಪೊಲೀಸರು ಪ್ರತಿದಾಳಿ ನಡೆಸುವ ಮೂಲಕ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಯಾರು?ಎಲ್ಲಿಂದ ಬಂದಿದ್ದಾರೆ?ಎಂಬ ಬಗ್ಗೆ ತಿಳಿದು ಬಂದಿಲ್ಲ ಎಂದು ತಿಳಿಸಿರುವ ಅವರು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. |