ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ತಾಲೀಮು ಎಂಬಂತೆ ರಾಜಕೀಯ ನಾಯಕರುಗಳ ವಾಗ್ದಾಳಿ ಆರಂಭಗೊಂಡಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಸರ್ಕಾರ ಶ್ರೀಮಂತರ ಪರ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಗುಜರಾತ್ ಕೈಗಾರಿಕೆ ಅಭಿವೃದ್ದಿಗೆ ಏನು ಮಾಡಬೇಕು ಎಂಬುದನ್ನು ದೆಹಲಿ ನಾಯಕರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ರಾಹುಲ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.ನ್ಯಾನೋವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ಗೂ ಕೂಡ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಮೋದಿ ಶನಿವಾರ ಸೂರತ್‌ನಲ್ಲಿ ಚುನಾವಣಾ ಪೂರ್ವ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪಶ್ಚಿಮಬಂಗಾಲದಿಂದ ಸೂರತ್‌ಗೆ ಸ್ಥಳಾಂತರಗೊಂಡ ನ್ಯಾನೋ ಯೋಜನೆ ಕಾಂಗ್ರೆಸ್ ಇತ್ತೀಚೆಗೆ ಕಟುವಾಗಿ ಟೀಕಿಸಿತ್ತು. ನರೇಂದ್ರ ಮೋದಿ ಸರ್ಕಾರ ಶ್ರೀಮಂತರ ಪರವಾದದ್ದು, ನಮ್ಮದು ಬಡವರ ಪರ ಸರ್ಕಾರ, ಈ ರಾಜ್ಯದಲ್ಲಿನ ಸರ್ಕಾರವನ್ನು ನೀವೇ ಉರುಳಿಸಬೇಕು. ನಿಮಗೆ ಅನುಕೂಲವಾಗುವ ಸರ್ಕಾರವನ್ನು ಚುನಾಯಿಸಬೇಕು ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್‌ನಲ್ಲಿ ಮಾತನಾಡುತ್ತ ಕರೆ ನೀಡಿದ್ದರು.ಗುಜರಾತ್‌ನಲ್ಲಿ ತಮ್ಮ ಮೂರು ದಿನಗಳ ಭೇಟಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್, ಟಾಟಾ ಅವರ ನ್ಯಾನೋ ಘಟಕಕ್ಕೆ ಏನೆಲ್ಲ ಸಹಾಯ, ಸವಲತ್ತುಗಳನ್ನು ಗುಜರಾತ್ ಸರ್ಕಾರ ನೀಡಿದೆ ಎಂಬುದನ್ನು ಜನರಿಗೆ ವಿವರಿಸಿದ್ದರು. ಅಲ್ಲದೇ ಡೈಮಂಡ್ ಕೈಗಾರಿಕೆಯಲ್ಲಿ ಜನರು ಕೆಲಸ ಕಳೆದುಕೊಳ್ಳುವಂತಾಗಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದಿದ್ದರು. |