ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೊಂದಿಲ್ಲ. ಹತ್ತು ವರ್ಷಗಳಿಂದ ಮಗ ಛತ್ತೀಸ್‌ಘರ್‌ನ ಶಾಸಕನಾಗಿರುವುದು ಸ್ವತಃ ಆತನ ತಂದೆಗೇ ಗೊತ್ತಿಲ್ಲ! 90ರ ಹರೆಯದ ತಂದೆ ಕವಾಸಿ ಅರ್ಮ ತನ್ನ ಮಗ ಕವಾಸಿ ಲಕ್ಮಾ ಹಿಂತಿರುಗಿ ಬಂದು ತನ್ನ ಜಮೀನಿನಲ್ಲಿ ನೇಗಿಲು ಹಿಡಿಯುತ್ತಾನೆ ಎಂಬ ಭ್ರಮೆಯಲ್ಲೇ ಈಗಲೂ ದಿನ ದೂಡುತ್ತಿದ್ದಾರೆ.
ತನ್ನ ಅಪ್ಪನಿಗೆ ತಾನು ಶಾಸಕನೆಂಬುದೇ ಗೊತ್ತಿಲ್ಲ ಎಂಬ ಅಂತರಂಗ ಸತ್ಯವನ್ನು ಬಿಚ್ಚಿಟ್ಟದ್ದು ಸ್ವತಃ ಶಾಸಕ ಲಕ್ಮ ಅವರು. ದಾಂಟೆವಾಡಾ ಜಿಲ್ಲೆಯ ನಾಗರಾಸ್ ಎಂಬ ಹಳ್ಳಿ ಲಕ್ಮಾ ಅವರ ಊರು. ಇದು ರಾಯಪುರದಿಂದ 450 ಕಿ.ಮೀ ದಕ್ಷಿಣಕ್ಕಿದೆ. 1998ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವ ಕವಾಸಿ ಲಕ್ಮಾ ಅವರೇ ಹೇಳುವಂತೆ, `ಬಹುಶಃ ನಾಗರಸ್ ದೇಶದ ಅತ್ಯಂತ ಬಡ ಹಳ್ಳಿಯೂ ಆಗಿರಬಹುದು. ಅಲ್ಲಿನ ಮಾವೋವಾದಿ ಬಂಡುಕೋರತನ ಆ ಹಳ್ಳಿಗರನ್ನು ಎಲ್ಲ ಹಳ್ಳಿಗಳ ಕನಿಷ್ಟ ಮಟ್ಟಕ್ಕೂ ಏರಿಸಿಲ್ಲ. ನಾನು ಆ ಹಳ್ಳಿಯ ಅತಿ ಅಪರೂಪದ ವ್ಯಕ್ತಿ. ಇಂತಹ ಶುದ್ಧವಾದ ಬಟ್ಟೆಯನ್ನು ಆ ಹಳ್ಳಿಯಲ್ಲಿ ಯಾರೂ ಧರಿಸುವುದಿಲ್ಲ. ಸ್ವತಃ ನನ್ನ ತಂದೆಗೇ ನಾನು ಎಂಎಲ್‌ಎ ಎಂಬ ವಿಷಯ ಗೊತ್ತಿಲ್ಲ. ಇಂತಹ ಶುದ್ಧ ಬಟ್ಟೆ ಧರಿಸಲು ಕಾರಣ ನಾನು ಯಾವುದೋ ಕ್ರಿಮಿನಲ್ ದಂಧೆಯಲ್ಲಿರಬಹುದು ಅಂತ ತಂದೆ ಅಂದುಕೊಂಡಿದ್ದಾರೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಲಕ್ಮಾ.
ಲಕ್ಮಾ ಅವರಿಗೆ ಈಗ 53ರ ಹರೆಯ. ಇದೀಗ ಮೂರನೇ ಬಾರಿಗೆ ಪುನರಾಯ್ಕೆಯಾಗಿ ಶಾಸಕರಾಗಿದ್ದಾರೆ. `ತಂದೆ ಕವಾಸಿ ಅರ್ಮ ಈಗಲೂ ಸಿಟಿಯಲ್ಲಿರುವ ಸಂಬಂಧಿಕರಲ್ಲಿ ತನ್ನ ಮಗ ಹಿಂತಿರುಗಿ ಬಂದು ನೇಗಿಲು ಹಿಡಿಯುತ್ತಾನೆ. ಜತೆಗೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಾನೆ ಅನ್ನುತ್ತಾರಂತೆ. ಜತೆಗೆ ಅವನನ್ನು ಕ್ರಿಮಿನಲ್ ಚಟುವಟಿಕೆಯಿಂದ ದೂರವಿಟ್ಟು ಮತ್ತೆ ಉಳುಮೆ ಮಾಡಲು ಒಪ್ಪಿಸಲು ಸಹಾಯ ಮಾಡಿ ಎಂದು ಹೇಳುತ್ತಿದ್ದಾರಂತೆ' ಎನ್ನುತ್ತಾರೆ ಲಕ್ಮ.
`ನನ್ನ ಅಪ್ಪ, ಮೂವರು ಸೋದರರು, ನನ್ನ ಹೆಂಡತಿ ಯಾರೂ ಶಾಲೆಗೇ ಹೋಗಿಲ್ಲ. ಈಗಷ್ಟೆ ನನ್ನ ಹಳ್ಳಿಯಲ್ಲಿ ಕೆಲವು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಯಾವುದೇ ರಾಜಕಾರಣಿ ಆ ಹಳ್ಳಿಗೆ ಭೇಟಿ ನೀಡಿದರೆ ಸಾಕು, ನನ್ನ ತಂದೆ ಅವರಲ್ಲಿ ನನ್ನ ಮಗನನ್ನು ಮತ್ತೆ ಇತ್ತ ಬಂದು ನೇಗಿಲು ಹಿಡಿಯಲು ಒಪ್ಪಿಸಿ ಎಂದು ದಂಬಾಲು ಬೀಳುತ್ತಾರಂತೆ' ಎನ್ನುತ್ತಾರೆ ಲಕ್ಮ.
ಜತೆಗೆ ಮಗನ ರಾಜಕೀಯ ಜೀವನದ ಯಾವ ವಿಷಯವನ್ನೂ ಅಪ್ಪ ಹಂಚಿಕೊಳ್ಳುವುದಿಲ್ಲ. `ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಪ್ಪನಿಗೆ, "ಕಾಂಗ್ರೆಸ್‌ಗೆ ಓಟು ಹಾಕಿ" ಎಂದು ಹೇಳಿದ್ದೆ. ಮತದಾನ ಮುಗಿದಾಗ ಅಪ್ಪನಿಗೆ, "ಯಾವ ಪಕ್ಷಕ್ಕೆ ಮತ ನೀಡಿದ್ದೀರಿ?" ಎಂದಾಗ ಅವರು "ಪೂಂಗರ್ ಚಿಹ್ನೆಗೆ ಹಾಕಿದ್ದೇನೆ" ಎಂದರು. ಪೂಂಗರ್ ಎಂದರೆ ಹಳ್ಳಿಯ ಗ್ರಾಮ್ಯ ಭಾಷೆಯಲ್ಲಿ ಹೂವು, ಅರ್ಥಾತ್ ಕಮಲ. "ಯಾಕೆ ಕಮಲಕ್ಕೆ ಓಟು ಹಾಕಿದಿರಿ?" ಎಂದುದಕ್ಕೆ ಅಪ್ಪ, "ನನಗೆ ಅದು ಚಂದ ಕಾಣಿಸಿತು. ಅದಕ್ಕೆ ಒತ್ತಿದೆ" ಎಂದಿದ್ದರು' ಎನ್ನುತ್ತಾರೆ ಲಕ್ಮ. |