ಆಂಧ್ರಪ್ರದೇಶ್ ಸೂಪರ್‌ಸ್ಟಾರ್ ಚಿರಂಜಿವಿ ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷಕ್ಕೆ ಫೆಬ್ರವರಿ 24 ರಂದು 3 ಸಾವಿರ ಮಾಜಿ ನಕ್ಸಲೀಯರು ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಮೂಲಗಳ ಪ್ರಕಾರ, ಸಿಪಿಐ(ಎಂಎಲ್) ಮತ್ತು ಸಿಪಿಐ (ಮಾವೋವಾದಿ) ಪಕ್ಷದ ಮೂರು ಸಾವಿರ ನಕ್ಸಲೀಯರು ಪಿಆರ್‌ಪಿ ಮುಖ್ಯಸ್ಥ ಚಿರಂಜಿವಿ ಮತ್ತು ಯುವರಾಜ್ಯಂ ಅಧ್ಯಕ್ಷ ಪವನ್ ಕಲ್ಯಾಣ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪೆಡಗೊಳ್ಳಲಿದ್ದಾರೆ ಎಂದು ಪ್ರಕಟಿಸಿವೆ.
ಸುಮಾರು ಆರು ತಿಂಗಳ ನಿರಂತರ ಕಠಿಣ ಶ್ರಮದಿಂದಾಗಿ ನಕ್ಸಲೀಯರೊಂದಿಗಿನ ಮಾತುಕತೆ ಫಲಪ್ರದವಾಗಿದ್ದು,ಗದ್ದಾರ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಮಾತುಕತೆ ಯಶಸ್ವಿಯಾಗಿದೆ ಎಂದು ಪಿಆರ್‌ಪಿ ನಾಯಕರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಗುಂಟೂರ್‌ನಲ್ಲಿ ಆಯೋಜಿಸಲಾದ ಪ್ರಥಮ ಸಭೆಯಲ್ಲಿ ಸುಮಾರು 800 ಮಾಜಿ ನಕ್ಸಲಿಯರು ಭಾಗವಹಿಸಿದ್ದು, ಪಕ್ಷದ ಹಿರಿಯ ಮುಖಂಡ ಡಾ.ಪಿ.ಮಿತ್ರಾ ಸಭೆಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಘೋಷಿಸಿದ ನಂತರ ಪಕ್ಷಕ್ಕೆ ಸೇರ್ಪಡೆಯಾಗಲು ಸಮ್ಮತಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸಭೆಗಳನ್ನು ಆಯೋಜಿಸಬೇಕು ಎನ್ನುವ ಉದ್ದೇಶವಿತ್ತು. ಆದರೆ ಸಮಯದ ಕೊರತೆ ಮತ್ತಿತರ ಅಭಾವಗಳಿಂದಾಗಿ ಫೆಬ್ರವರಿ 24 ರಂದು ಹೈದ್ರಾಬಾದ್‌ನಲ್ಲಿ ರಾಜ್ಯಮಟ್ಟದ ಸಭೆಯನ್ನು ಕರೆಯಲಾಗಿದೆ ಎಂದು ಪೀಪಲ್ಸ್ ವಾರ್ ಮಾಜಿ ಕಾರ್ಯಕರ್ತ ಸತ್ಯನಾರಾಯಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ. |