ಕೇದಾರೇಶ್ವರ, ಬದರಿನಾಥ್, ಕಾಶಿ ವಿಶ್ವನಾಥ್ ಸೇರಿದಂತೆ ರಾಜ್ಯದ ಗೋಕರ್ಣ, ಮುರ್ಡೇಶ್ವರ, ಧಾರೇಶ್ವರ, ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯಗಳಲ್ಲಿ ಸೋಮವಾರ ಶಿವರಾತ್ರಿಯ ಅಂಗವಾಗಿ ಭಕ್ತರ ದಂಡೇ ನೆರೆದಿದ್ದು, ದೇಶಾದ್ಯಂತ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ.ಇದು ಜಗದೀಶ್ವರನಿಗೆ ಜಗದ ನಮನ ಸಲ್ಲಿಸುವ ಪರ್ವಕಾಲ, ಇಂದು ದಿನವಿಡಿ ಉಪವಾಸ, ರಾತ್ರಿಯಿಡೀ ಜಾಗರಣೆ ನಡೆಯಲಿದ್ದು, ಧಾರೇಶ್ವರ ಹಾಗೂ ಮುರ್ಡೇಶ್ವರಗಳಲ್ಲಿ ಶಿವಲಿಂಗ ದರ್ಶನಕ್ಕಾಗಿ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು. ಗೋಕರ್ಣದಲ್ಲಿ ಆತ್ಮಲಿಂಗ ದರ್ಶನಕ್ಕಾಗಿ ಬೆಳಗ್ಗಿನಿಂದಲೇ ಜನಸಾಗರ ನೆರೆದಿದ್ದಾರೆ. ಕಾಶಿ ವಿಶ್ವನಾಥ ದೇಗುಲಕ್ಕೆ ಭದ್ರತೆ: ಕಾಶಿ ವಿಶ್ವನಾಥ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಮೂರು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ದೇವಾಲಯಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅರೆ ಸೇನಾ ಪಡೆಯ 24 ಹೆಚ್ಚುವರಿ ತುಕಡಿಗಳನ್ನು ನೇಮಿಸಲಾಗಿದೆ ಎಂದು ಐಜಿ ಮೀನಾ ತಿಳಿಸಿದ್ದಾರೆ.ಶಸ್ತ್ರ ಸಜ್ಜಿತ ಕಮಾಂಡೋಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಪಕ್ಕಾ ಗುರಿಕಾರರನ್ನು ನೇಮಿಸಲಾಗಿದೆ. ದೇವಾಲಯದ ಪ್ರದೇಶದಲ್ಲಿ ಓಡಾಡುವ ಅನುಮಾನಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ಕಣ್ಣಿಡಲು ಸಿಸಿಟಿವಿಗಳನ್ನು ಪ್ರಮುಖ ಕಟ್ಟಡಗಳಲ್ಲಿ ಇರಿಸಲಾಗಿದೆ ಎಂದು ಹೇಳಿದರು. |