ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಪೊಲೀಸ್ ಮತ್ತು ವಕೀಲರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ, ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ವಕೀಲರು ಪಟ್ಟು ಹಿಡಿದಿದ್ದರೆ, ಮುಷ್ಕರ ಕೈಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಎಂಬುದಾಗಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎ.ಜೆ.ಬಾಲಕೃಷ್ಣನ್ ಮನವಿ ಮಾಡಿಕೊಂಡಿದ್ದರೂ ಕೂಡ ಪ್ರತಿಭಟನೆ ಮುಂದುವರಿದಿದೆ.
ಏತನ್ಮಧ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಪೊಲೀಸರು ಮತ್ತು ವಕೀಲರ ನಡುವಿನ ತಿಕ್ಕಾಟವನ್ನು ಕೂಡಲೇ ಬಗೆಹರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ತಾನು ಉಪವಾಸ ಮುಷ್ಕರ ಹೂಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
ಫೆಬ್ರುವರಿ 19ರಂದು ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ತಮಿಳುನಾಡು ಬಾರ್ ಕೌನ್ಸಿಲ್ ಹಾಗೂ ಪಾಂಡಿಚೇರಿ ಬಾರ್ ಕೌನ್ಸಿಲ್‌ನ ವರಿಷ್ಠರು ಸಭೆ ನಡೆಸಿ, ಚೆನ್ನೈ ಪೊಲೀಸ್ ಕಮೀಷನರ್, ಡಿಜಿಪಿ ಸೇರಿದಂತೆ ಪೊಲೀಸ್ ವರಿಷ್ಠಧಾಕಾರಿಗಳನ್ನು ಅಮಾನತುಗೊಳಿಸುವವರೆಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದರು.
ಡಿಜಿಪಿ ಹಾಗೂ ಪೊಲೀಸ್ ಕಮೀಷನರ್ ಅವರನ್ನು ಅಮಾನತುಗೊಳಿಸದೆ ಕರ್ತವ್ಯಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ ಎಂದು ವಕೀಲರ ಸಂಘಟನೆ ತಿಳಿಸಿದ್ದು, ಗಲಭೆಯಲ್ಲಿ ಅವರು ನೇರವಾಗಿ ಶಾಮೀಲಾಗಿರುವುದಾಗಿ ಮದ್ರಾಸ್ ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆರ್.ಸಿ.ಪೌಲ್ ಕನಕರಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |