ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮಿರ್ ಕಸಬ್‌ಗೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ಮುಂಬೈ ಪೊಲೀಸರು ಅಂತಿಮಗೊಳಿಸಿದ್ದಾರೆ.ಕಸಬ್ ವಿರುದ್ಧ ತಯಾರಿಸಿರುವ ಆರೋಪಪಟ್ಟಿ ಸುಮಾರು 10ಸಾವಿರ ಪುಟಗಳಿದ್ದು, ಇದೊಂದು ಬೃಹತ್ ಚಾರ್ಜ್‌ಶೀಟ್ ಎಂದು ಎನ್‌ಡಿಟಿವಿ ವರದಿ ತಿಳಿಸಿದ್ದು, ಇದಕ್ಕಾಗಿ 200 ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಬಳಸಿಕೊಳ್ಳಲಾಗಿದೆ. 26 /11ರ ಮುಂಬೈ ದಾಳಿಗೆ ಪಾಕಿಸ್ತಾನದಲ್ಲಿ ಯಾವ ತೆರನಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು ಎಂಬುದನ್ನು ಹತ್ತು ಸಾವಿರ ಪುಟಗಳ ವರದಿಯಲ್ಲಿ ವಿವರವಾಗಿ ದಾಖಲೆ ಸಹಿತ ವಿರವಣೆ ನೀಡಲಾಗಿದೆ.ಅಲ್ಲದೇ ಆರೋಪ ಪಟ್ಟಿಯಲ್ಲಿ ಕಸಬ್ ತನಿಖೆಯ ವೇಳೆಯಲ್ಲಿ ತಿಳಿಸಿರುವ ಏಳು ಮಂದಿಯ ಹೆಸರನ್ನು ದಾಖಲಿಸಲಾಗಿದೆ. ಅದರಲ್ಲಿ ಜಾಕಿ ಉರ್ ರೆಹಮಾನ್ ಲಕ್ವಿ, ಜರಾರ್ ಷಾ, ಜಾವೇದ್ ಇಕ್ಬಾಲ್, ಅಬು ಹಮ್ಜಾ, ಕಾಫಾ, ಯೂಸೂಫ್ ಮುಜಾಮಿಲ್ ಮತ್ತು ಅಬು ಅಲ್ ಕ್ವಾಮಾ ಮುಂಬೈ ದಾಳಿ ಸಂಚಿನ ಪ್ರಮುಖ ರೂವಾರಿಗಳೆಂದು ಉಲ್ಲೇಖಿಸಲಾಗಿದೆ.ಆದರೆ ಆರೋಪಿತರನ್ನು ಮೋಕ ಕಾಯ್ದೆಯಡಿ ಆರೋಪಪಟ್ಟಿ ದಾಖಲಿಸಿಲ್ಲ, ಬದಲಾಗಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಕಾಯ್ದೆ, ರಾಷ್ಟ್ರ ವಿರೋಧಿ ವಿದ್ರೋಹದ ಯುಎಪಿಎ ಕಾಯ್ದೆ, ಕಸ್ಟಮ್ಸ್ ಕಾಯ್ದೆ ಹಾಗೂ ಕೆಲವು ಸೈಬರ್ ಕ್ರೈಮ್ ಕಾಯ್ದೆಯನ್ವಯ ದೂರು ದಾಖಲಿಸಲಾಗಿದೆ.ಆರೋಪಪಟ್ಟಿಯಲ್ಲಿ 200 ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಎಸ್‌ಟಿ ಸ್ಟೇಶನ್‌ನಲ್ಲಿನ ಸಿಸಿಟಿವಿ ವೀಡಿಯೋ ಚಿತ್ರದ ದೃಶ್ಯ ಹಾಗೂ ವೈಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್(ವಿಓಐಪಿ) ಮೂಲಕ ಭಯೋತ್ಪಾದಕರು ಮಾಡಿದ ದೂರವಾಣಿ ಕರೆಗಳ ವಿವರ ಕೂಡ ಸೇರಿದೆ. |