ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಅಕ್ರಮವಾಗಿ ಹಣ ಇಟ್ಟ ಖಾತೆದಾರರ ಬಗ್ಗೆ ಆಡಳಿತಾರೂಢ ಯುಪಿಎ ಸರ್ಕಾರ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದು ಸೋಮವಾರ ಸಿಪಿಎಂ ಬಲವಾಗಿ ಆಗ್ರಹಿಸಿದೆ.
ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿದವರ ಬಗ್ಗೆ ವಿವರಣೆ ನೀಡುವ ಕುರಿತು ಸ್ವಿಸ್ ಬ್ಯಾಂಕ್ ಅಮೆರಿಕಕ್ಕೆ ತಿಳಿಸಿರುವ ಹಿನ್ನೆಲೆಯಲ್ಲಿ, ಭಾರತ ಕೂಡ ಎಷ್ಟು ಮಂದಿ ಅಕ್ರಮವಾಗಿ ಸ್ವಿಸ್ ಬ್ಯಾಂಕಿನಲ್ಲಿ ಭಾರೀ ಪ್ರಮಾಣದ ಹಣ ಇಟ್ಟಿದ್ದಾರೆಂಬ ವಿವರ ಪಡೆಯಬೇಕೆಂದು ಸಿಪಿಎಂ ಒತ್ತಾಯಿಸಿದೆ.
ಸ್ವಿಸ್ ಬ್ಯಾಂಕ್ ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ಇಟ್ಟಿರುವ ಭಾರತೀಯ ಸ್ವಿಸ್ ಬ್ಯಾಂಕ್ ಖಾತೆದಾರರ ವಿವರಗಳನ್ನು ಯುಪಿಎ ಸರ್ಕಾರ ಪಡೆಯಬೇಕು ಎಂದು ಸಿಪಿಎಂ ಪಾಲಿಟ್ ಬ್ಯೂರೋ ತಿಳಿಸಿದೆ.
ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದುವ ಉದ್ದೇಶ ಕೇವಲ ಭಾರತಕ್ಕೆ ತೆರಿಗೆ ವಂಚನೆ ಮಾಡುವುದು ಮಾತ್ರವಲ್ಲ, ವಿದೇಶಗಳಲ್ಲಿ ಅಕ್ರಮವಾಗಿ ಹಣವನ್ನು ಕೂಡಿಡುವ ಸಂಚು ಸಿಪಿಎಂ ಪ್ರಕಟಣೆಯಲ್ಲಿ ಕಿಡಿಕಾರಿದೆ.
ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಿಸ್ ಬ್ಯಾಂಕ್ ಮಾಹಿತಿ ನೀಡಲು ಈಗಾಗಲೇ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಆಡಳಿತಾರೂಢ ಯುಪಿಎ ಸರ್ಕಾರ ಕಪ್ಪು ಹಣ ಚಲಾವಣೆಯನ್ನು ನಿಲ್ಲಿಸಬೇಕು ಹಾಗೂ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವ ಕ್ರಮಕೈಗೊಳ್ಳಬೇಕು. ಆ ನೆಲೆಯಲ್ಲಿ ವಿದೇಶದಲ್ಲಿ ಇರುವ ಲೆಕ್ಕವಿಲ್ಲದಷ್ಟು ಬೇನಾಮಿ ಹಣಗಳನ್ನು ವಾಪಸು ತರುವ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದೆ. |