ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ತನಿಖೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಮಾಹಿತಿಯನ್ನು ನೀಡಲು ಸಿದ್ದ ಎಂದು ಭರವಸೆ ನೀಡಿರುವ ಭಾರತ, ಯಾವುದಕ್ಕೂ ಪಾಕ್ ಅಧಿಕೃತವಾಗಿ ಕೋರಿಕೆ ಸಲ್ಲಿಸಬೇಕು ಎಂದು ಸೂಚಿಸಿದೆ.
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಗತ್ಯವಿದ್ದಲ್ಲಿ ಭಾರತ ಸಹಕರಿಸಲು ಸಿದ್ದ, ಆದರೆ ದಾಳಿ ಕುರಿತು ಜಂಟಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ಬೇಕಿದ್ದಲ್ಲಿ, ಅದಕ್ಕೆ ಪ್ರತಿಕ್ರಿಯಿಸಲು ನಾವು ಸಿದ್ದ ಎಂದಿರುವ ಮುಖರ್ಜಿ, ಪಾಕ್ ಅಧಿಕೃತ ಚಾನೆಲ್ ಮೂಲಕವೇ ಸಂದೇಶ ರವಾನಿಸಬೇಕೆ ವಿನಃ ಮಾಧ್ಯಮಗಳ ಮೂಲಕ ಅಲ್ಲ ಎಂದು ಹೇಳಿದರು.
ಮುಂಬೈ ದಾಳಿಯ ಸಂಚು ತನ್ನ ನೆಲದಲ್ಲಿಯೇ ರೂಪುಗೊಂಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಪಾಕಿಸ್ತಾನ, ಭಾರತಕ್ಕೆ ಸುಮಾರು 30 ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಪೂರಕ ಮಾಹಿತಿ ನೀಡುವಂತೆ ಸೂಚಿಸಿತ್ತು. ಆ ನಿಟ್ಟಿನಲ್ಲಿ ಪಾಕ್ ಕೇಳಿರುವ ಪ್ರಶ್ನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರಣಬ್ ತಿಳಿಸಿದ್ದಾರೆ. |