ಚಿತ್ರಹಿಂಸೆಗೆ ಒಳಗಾದ ಪರಿಶುದ್ಧ ಪ್ರೀತಿಗೆ ಸಾಂಕೇತಿಕ ಹೆಸರಾದ ಲೈಲಾ- ಮಜ್ನು ಜೋಡಿ ತಮ್ಮ ಸಾವಿನ ಮೊದಲು ರಾಜಸ್ತಾನದ ಒಂದು ಹಳ್ಳಿಯಲ್ಲಿ ಆಶ್ರಯ ಪಡೆದಿದ್ದರೇ? ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್‌ಘರ್ ಬಳಿಯ ಬಿಜ್ನೋರ್ ಎಂಬ ಹಳ್ಳಿಯ ಮಂದಿ ಈ ಸಂದೇಹಕ್ಕೆ `ಹೌದು' ಎಂಬ ಉತ್ತರ ನೀಡುತ್ತಾರೆ. ಜತೆಗೆ ಹಾಗೆಂದು ನಂಬಿಕೊಂಡೇ ಬಂದಿದ್ದಾರೆ.
ಗ್ರಾಮೀಣ ದಂತಕಥೆಗಳ ಪ್ರಕಾರ ಲೈಲಾ, ಮಜ್ನು ಸಿಂಧ್ ಪ್ರಾಂತ್ಯದಿಂದ ತಪ್ಪಿಸಿಕೊಂಡು ಈ ಪ್ರಾಂತ್ಯಕ್ಕೆ ಬಂದು ಕೆಲವು ದಿನಗಳ ನಂತರ ಇದೇ ಪ್ರದೇಶದಲ್ಲಿ ಮರಣಹೊಂದಿದ್ದರು. ಲೈಲಾ-ಮಜ್ನು ಅವರದೆಂದು ಹೇಳಲಾಗುತ್ತಿರುವ ಬಿಜ್ನೋರ್ ಪ್ರದೇಶದಲ್ಲಿ ಉಪೇಕ್ಷಿಸಲ್ಪಟ್ಟ ಪ್ರೇಮಿಗಳಿಬ್ಬರ ತೆರೆದ ಸಮಾಧಿಗಳನ್ನು ಈಗ ಶ್ರೀಗಂಗಾನಗರದ ಆಡಳಿತ ಅಭಿವೃದ್ಧಿಗೊಳಿಸಲು ಹೊರಟಿದೆ. ಆ ಮೂಲಕ ಚಿರಂತನ ಪ್ರೇಮಕ್ಕೆ ಗೌರವ ಅರ್ಪಿಸಲು ಹೊರಟಿದೆ.
ರಾಜಸ್ತಾನ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹನುಮಾನ್ ಮಾಲ್ ಆರ್ಯ ಹೇಳುವಂತೆ, ಭಾರತ- ಪಾಕ್ ಗಡಿ ಪ್ರದೇಶದಲ್ಲಿರುವ ಪ್ರದೇಶಗಳನ್ನು ಪ್ರವಾಸೋದ್ಯಮ ವಿಭಾಗ ಅಭಿವೃದ್ಧಿಗೊಳಿಸಲು ಹೊರಟಿದೆ. ನಶಿಸಿಹೋಗುತ್ತಿರುವ ಲೈಲಾ-ಮಜ್ನು ಗೋರಿಯ ಅಭಿವೃದ್ಧಿಗೆ 25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದರು.
ಐತಿಹಾಸಿಕ ಹಿನ್ನೆಲೆ ಇಲ್ಲ?
ಈ ಲೈಲಾ -ಮಜ್ನು ಪ್ರಣಯ ಪಕ್ಷಿಗಳು ನೇಝಮಿ ಗಂಜ್ವೀರ್ (ಪರ್ಶಿಯನ್ ಸಾಹಿತಿ) ಬರಹಗಳ ಮೂಲಕ ಏಳನೇ ಶತಮಾನದಲ್ಲಿ ಲೋಕಕ್ಕೆ ಪರಿಚಯವಾಗಿದ್ದರು. ಭಾರತೀಯ ಹಾಗೂ ಟರ್ಕಿ ಸಂಸ್ಕೃತಿಗಳ ಪರಿಚಯ ನೀಡುವ ಈ ಜೋಡಿಗಳ ಕಥಾನಕಕ್ಕೆ ಐತಿಹಾಸಿಕ ಹಿನ್ನೆಲೆ ಇಲ್ಲ ಎಂಬುದು ಹಲವರ ವಾದ. ಲೈಲಾ ಪ್ರೀತಿಯಲ್ಲಿ `ಮ್ಯಾಡ್' ಆದ ಅರ್ಥಾತ್ ಹುಚ್ಚನಾದವನನ್ನು ಮಜ್ನು ಎಂದು ಹೆಸರಿಡಲಾಯಿತು ಎಂಬ ಹಿನ್ನೆಲೆಯೂ ಇದಕ್ಕಿದೆ.
ಆದರೆ, ಬಿಜ್ನೋರ್‌ನ ಜನತೆ ಅಲ್ಲಿನ ಗೋರಿಯ ಪಕ್ಕದಲ್ಲೇ ಇರುವ ಬಾವಿಯನ್ನೂ ಲೈಲಾ ಮಜ್ನು ಜೋಡಿ ಬಳಸುತ್ತಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇದು ಕೇವಲ ದಂತಕಥೆಯಾದರೆ, ಕಳೆದ ಎಷ್ಟೋ ವರ್ಷಗಳಿಂದ ಈ ಗೋರಿಯ ಬಳಿ ನಡೆಯುವ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿಲ್ಲವೇ ಎಂದು ಪ್ರಶ್ನಿಸುತ್ತಾರೆ ಈ ಗೋರಿಯನ್ನು ನೋಡಿಕೊಳ್ಳುವ ಬಾಬಾ ಚೋಪ್ಡಾಸ್.
ಈ ಗೋರಿಯ ಬಳಿಯಲ್ಲಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೆಯುವ ಉತ್ಸವಕ್ಕೆ ನೂರಾರು ಮಂದಿ ಮದುವೆಯಾದ ಹೊಸ ದಂಪತಿಗಳು ಹಾಗೂ ಪ್ರೇಮಿಗಳು ಬರುತ್ತಾರೆ. ಜತೆಗೆ ಪರಿಶುದ್ಧ ಪ್ರೇಮಕ್ಕೆ ನಮನ ಸಲ್ಲಿಸುತ್ತಾರೆ. ಕಳೆದ ವರ್ಷ ನಡೆದ ಉತ್ಸವದಲ್ಲಿ ಹಲವರು ಇಲ್ಲಿ ರಾತ್ರಿ ಉಳಿದುಕೊಳ್ಳಲು ಸರಿಯಾದ ಸೌಲಭ್ಯಗಳಿಲ್ಲ ಎಂದಿದ್ದಕ್ಕೆ ಈಗ ಪ್ರವಾಸೋದ್ಯಮ ಇಲಾಖೆ ಈ ಪ್ರದೇಶದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದೆ. |