ಸಂಬಾಲ್‌ಪುರದ ಕಾವಲುಗಾರರಿಲ್ಲದ ಲೆವೆಲ್‌ಕ್ರಾಸಿಂಗ್‌ನಲ್ಲಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ವಧು ಸೇರಿದಂತೆ ಮದುವೆ ದಿಬ್ಬಣದ 14 ಜನರು ಮೃತಪಟ್ಟಿದ್ದು, ಇನ್ನೂ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ 3.50ಕ್ಕೆ ವಧು ತನ್ನ ಕುಟುಂಬಿಕರೊಂದಿಗೆ ಜೀಪಿನಲ್ಲಿ ತನ್ನ ಮಾವನ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಾರ್ಗಾ ಮತ್ತು ಬರ್ಪಾಲಿ ರೈಲ್ವೆ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ ದಾಟುತ್ತಿದ್ದಾಗ ಬಲಂಗೀರ್-ಪುರಿ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆಯಿತೆಂದು ರೈಲ್ವೆ ಮೂಲಗಳು ಹೇಳಿವೆ.
ರೈಲಿನ ಎಂಜಿನ್‌ಗೆ ಸಿಕ್ಕಿಹಾಕಿಕೊಂಡ ಜೀಪನ್ನು ಹಳಿ ಮೇಲೆ 200 ಮೀ ದೂರ ಎಳೆಯಿತೆಂದೂ ಬಳಿಕ ಜೀಪ್‌ಗೆ ಬೆಂಕಿ ಹತ್ತಿಕೊಂಡಿದ್ದರಿಂದ 7 ಮಹಿಳೆಯರು ಸೇರಿದಂತೆ ಮಗುವೊಂದು ಸಜೀವ ದಹನವಾದರೆಂದು ಪೊಲೀಸರು ತಿಳಿಸಿದ್ದಾರೆ.
12 ಜನರು ಸ್ಥಳದಲ್ಲೇ ಸತ್ತಿದ್ದಾರೆಂದು ಬಾರ್ಗಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಖಚಿತಪಡಿಸಿದ್ದು, ಇನ್ನಿಬ್ಬರು ತೀವ್ರಗಾಯಗಳಿಂದ ಮೃತಪಟ್ಟರೆಂದು ರೈಲ್ವೆ ಮೂಲಗಳು ಹೇಳಿವೆ. ವಧು ಪಿಂಕಿ ಡೆಹುರಿ ಮತ್ತು ಜೀಪಿನ ಚಾಲಕ ಸತ್ತವರಲ್ಲಿ ಸೇರಿದ್ದು, ವರ ವಿವಾಹದ ಸ್ಥಳದಿಂದ 18 ಕಿಮೀ ದೂರದಲ್ಲಿರುವ ತನ್ನ ಮನೆಗೆ ವಧುವಿಗಿಂತ ಮುಂಚಿತವಾಗಿ ತೆರಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ. |