ಇಲ್ಲಿನ ಧಾನಿಯಾಖಾಲಿ ಗ್ರಾಮದಲ್ಲಿ ಸಿಪಿಐ ಮುಖಂಡರೊಬ್ಬರ ಪತ್ನಿ ಹಾಗೂ ಮಗುವನ್ನು ಮನೆಯಿಂದ ಹೊರಗೆಳೆದು ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಭಾನುವಾರ ನಡೆದಿದ್ದು, ಸಹಾಯಕ್ಕಾಗಿ ಅಂಗಲಾಚಿ ಮಗು ಸಾವನ್ನಪ್ಪಿದ್ದರೆ, ತಾಯಿ ಸುಟ್ಟಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಈ ದುಷ್ಕೃತ್ಯವನ್ನು ಜಾರ್ಖಂಡ್ ದಿಸೋಮ್ ಪಾರ್ಟಿ (ಜೆಡಿಪಿ) ಮಾಡಿರುವುದಾಗಿ ಸ್ಥಳೀಯ ಸಿಪಿಎಂ ಘಟಕ ಗಂಭೀರವಾಗಿ ಆರೋಪಿಸಿದ್ದು, ಘಟನೆಯನ್ನು ಖಂಡಿಸಿ ಮಂಗಳವಾರ ಧಾನಿಯಾಖಾಲಿ ಬಂದ್‌ಗೆ ಕರೆ ನೀಡಿದೆ.
ಭಾನುವಾರ ಸಂಜೆ ಸುಮಾರು 15ಮಂದಿ ಶಸ್ತ್ರ ಸಜ್ಜಿತ ತಂಡವೊಂದು ಸ್ಥಳೀಯ ಗೋಬಾರ್ ಆರಾ ಗ್ರಾಮ್ ಪಂಚಾಯ್ತಿ ಸಮಿತಿಯ ಸದಸ್ಯ ಲೋಂಚೋ ಮಾಂಡಿ ಮನೆಯೊಳಕ್ಕೆ ನುಗ್ಗಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿ ಮಾಂಡಿ ಪತ್ನಿ ಜಾರ್ನಾ (22ವ) ಹಾಗೂ ಪುಟ್ಟ ಮಗು ಸುಮನಾ ಮಾತ್ರ ಇದ್ದಿದ್ದು, ದುಷ್ಕರ್ಮಿಗಳು ಅವರಿಬ್ಬರ ಮೇಲೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿತ್ತು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮಗು ಸಹಾಯಕ್ಕಾಗಿ ಅಂಗಲಾಚುತ್ತಲೇ ಅಸು ನೀಗಿತ್ತು, ಆದರೆ ಜಾರ್ನಾ ದೇಹ ಶೇ.70ರಷ್ಟು ಸುಟ್ಟುಹೋಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. |