ಅತ್ತ ಒಂದೊಂದೇ ಆಸ್ಕರ್ ಪ್ರಶಸ್ತಿಗಳನ್ನು 'ಸ್ಲಮ್‌ಡಾಗ್ ಮಿಲಿಯನೇರ್' ಪಡೆದುಕೊಳ್ಳುತ್ತಿರುವಂತೆ ಅದೇ ದಿನ ಗುಜರಾತ್ ಉಚ್ಛ ನ್ಯಾಯಾಲಯವು ಚಿತ್ರದ ಶೀರ್ಷಿಕೆ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ನಂತರ ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಅಹವಾಲನ್ನು ತಿರಸ್ಕರಿಸುವ ಮೊದಲು 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರವನ್ನು ವೀಕ್ಷಿಸಿದ್ದರು.
"ಕೊಳಗೇರಿ ವಾಸಿಗಳು, ಬಡತನ, ಪೊಲೀಸ್ ದೌರ್ಜನ್ಯ, ಮಕ್ಕಳನ್ನು ಹಾದಿ ತಪ್ಪಿಸುವುದು ಮುಂತಾದ ಪ್ರಮುಖ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ಚಿತ್ರ ಸ್ಫೂರ್ತಿ ಮತ್ತು ಸಾಧನ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದ ಶೀರ್ಷಿಕೆ 'ಸ್ಲಮ್‌ಡಾಗ್' ಎನ್ನುವುದು ಕೊಳೆಗೇರಿ ವಾಸಿಗಳನ್ನು ಅವಹೇಳನ ಮಾಡಿದಂತೆ ಮತ್ತು ಇದು ಅವಮಾನ ಎನ್ನುವ ಸಾಮಾಜಿಕ ಸಂಘಟನೆಯ ಮೀನಾ ಜಗ್ತಾಪ್‌ರವರ ವಾದವನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ. ಬದಲಿಗೆ ಕೊಳೆಗೇರಿ ವಾಸಿಗಳಲ್ಲಿನ ಅವ್ಯಕ್ತ ಪ್ರತಿಭೆ ಮತ್ತು ಅವರಲ್ಲಿನ ಅವಲೋಕನಾ ಅರ್ಹತೆಯನ್ನು ಗುರುತಿಸಿ ಬಹಿರಂಗಪಡಿಸಿದ್ದಕ್ಕೆ ನಿರ್ದೇಶಕ ಡ್ಯಾನಿ ಬೋಯ್ಲೆಯವರನ್ನು ನ್ಯಾಯಾಲಯ ಶ್ಲಾಘಿಸಿದೆ.
ಜಸ್ಟೀಸ್ ರಾಧಾಕೃಷ್ಣನ್‌ರವರು, "ಸಾಂಪ್ರದಾಯಿಕ ದೃಷ್ಟಿಯಿಂದ ಇಂತಹ ಒಂದು ಚಿತ್ರವನ್ನು ನೋಡಿದಾಗ ನಮಗಲ್ಲಿ ಮನರಂಜನೆ ಸಿಗದು. ನಮ್ಮ ಸಮಾಜ ಮತ್ತು ನೈಜ ಜೀವನವನ್ನು ವ್ಯಾಖ್ಯಾನಕ್ಕೊಳಪಡಿಸಿ ವಿಶಾಲ ಮನೋಭಾವದಿಂದಿರಬೇಕಾಗಿದೆ" ಎಂದಿದ್ದಾರೆ.
ಮುಂದುವರಿದ ಹೇಳಿಕೆಯಲ್ಲಿ ಅವರು, "ಕೊಳೆಗೇರಿ ಬಾಲಕನನ್ನು ಅಂಡರ್‌ಡಾಗ್ ಅಥವಾ ಸ್ಲಮ್‌ಡಾಗ್ ಎನ್ನುವ ಚಿತ್ರಣವು ಯಾರ ಮನಸ್ಸಿಗೂ ನೋವುಂಟು ಮಾಡುವಷ್ಟು ಕೀಳುಮಟ್ಟದ್ದಾಗಿಲ್ಲ. ಅಲ್ಲದೆ ಮುಂದೆ ಭಾರೀ ಸಂಪತ್ತು ಪಡೆಯುವವನಂತೆ ಮುಂಬೈ ಕೊಳೆಗೇರಿಯ ಅನರ್ಘ್ಯ ಬಾಲಕನನ್ನಾಗಿ ಚಿತ್ರಿಸಲಾಗಿದೆ. ಈ ಕಾರಣದಿಂದ 'ಸ್ಲಮ್‌ಡಾಗ್ ಮಿಲಿಯನೇರ್' ಶೀರ್ಷಿಕೆ ಯಾವುದೇ ಸಾರ್ವಜನಿಕ ಮೌಲ್ಯಗಳಿಗೆ ಅಥವಾ ಶಿಷ್ಟಾಚಾರಕ್ಕೆ ಅಡ್ಡಿ ಮಾಡಿಲ್ಲ" ಎಂದು ತೀರ್ಪು ನೀಡಿ ಈ ಸಂಬಂಧ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ವಜಾ ಮಾಡಿದ್ದಾರೆ.
|