ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ರಾಜಕೀಯ ಪಕ್ಷಗಳು ತಾಲೀಮು ನಡೆಸತೊಡಗಿವೆ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಾರ್ವಜನಿಕವಾಗಿಯೇ ವಾಗ್ದಾಳಿಗೆ ಇಳಿದು ಬಿಟ್ಟಿದ್ದಾರೆ. ಆದರೆ ಕುತೂಹಲಕಾರಿ ಅಂಶ ಏನೆಂದರೆ ಸಿಎನ್‌ಎನ್-ಐಬಿಎನ್‌ನ ಸಿಎಸ್‌ಡಿಎಸ್ ಸಮೀಕ್ಷಾ ವರದಿ ಪ್ರಕಾರ ಇದು ರಾಹುಲ್ ಮತ್ತು ಮೋದಿ ನಡುವಿನ ಕದನವಲ್ಲ, ಬದಲಾಗಿ ಸೋನಿಯಾಗಾಂಧಿ v/s ಎಲ್.ಕೆ.ಆಡ್ವಾಣಿ ನಡುವಿನ ನಿಜವಾದ ಮುಖಂಡತ್ವದ ಹೋರಾಟ ಕಣವಾಗಿ ಮಾರ್ಪಟ್ಟಿದೆ.ರಾಷ್ಟ್ರದ್ಯಾಂತ 23 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಮತದಾರರು ತಮ್ಮ ಇಷ್ಟದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಮತ ಚಲಾಯಿಸಿದ ವಿವರ ಇಂತಿದೆ.ಕಾಂಗ್ರೆಸ್ ಮತದಾರರ ಆಯ್ಕೆ:ರಾಹುಲ್ ಗಾಂಧಿ ಪ್ರಧಾನಿಯಾಗಲು ಶೇ.13ರಷ್ಟು ಮತದಾರರು ಬೆಂಬಲಿಸುವ ಮೂಲಕ 3ನೇ ಸ್ಥಾನ ದಕ್ಕಿಸಿಕೊಂಡಿದ್ದಾರೆ.ಹಾಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಶೇ. 23ರಷ್ಟು ಜನ ಬೆಂಬಲಿಸಿ 2ನೇ ಸ್ಥಾನ ಕರುಣಿಸಿದ್ದಾರೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಶೇ.46ರಷ್ಟು ಕಾಂಗ್ರೆಸ್ ಮತದಾರರು ಸ್ಪಷ್ಟ ಒಲವು ತೋರುವ ಮೂಲಕ ಪ್ರಧಾನಿ ಗದ್ದುಗೆ ಏರಬೇಕೆಂಬ ಪ್ರಬಲ ಇಚ್ಚೆ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಮತದಾರರ ಆಯ್ಕೆ:ಅಭಿವೃದ್ದಿಯ ಹರಿಕಾರ ಎಂಬುದಾಗಿ ಬಿಂಬಿಸಲ್ಪಟುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಶೇ.10ರಷ್ಟು ಮತದಾರರು ಪ್ರಧಾನಿಯಾಗಲು ಬೆಂಬಲ ಸೂಚಿಸುವ ಮೂಲಕ 3ನೇ ಸ್ಥಾನ ನೀಡಿದ್ದಾರೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶೇ.27ರಷ್ಟು ಮತದಾರರು ಬೆಂಬಲಿಸುವ ಮೂಲಕ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಶೇ.31ರಷ್ಟು ಮತದಾರರು ಬೆಂಬಲ ಸೂಚಿಸಿ ಪ್ರಥಮ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ.ಇದರಲ್ಲಿ ಕುತೂಹಲಕಾರಿ ಅಂಶವೆಂದರೆ ಈ ಮೊದಲು ಬಿಜೆಪಿಯಲ್ಲಿ ಪ್ರಧಾನಿ ಹುದ್ದೆ ಪ್ರಸ್ತಾಪವಾಗುತ್ತಿದ್ದಾಗ ಪ್ರಥಮ ಸ್ಥಾನ ಅಲಂಕರಿಸುತ್ತಿದ್ದವರು ಅಟಲ್ ಬಿಹಾರಿ ವಾಜಪೇಯಿ, ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಅಟಲ್ ಅವರ 'ಕಾಲ'ಅಂತ್ಯಗೊಂಡಂತಾಗಿದೆ ಎಂಬುದನ್ನು ಮನಗಂಡ ಮತದಾರರು ಆಡ್ವಾಣಿಯವರನ್ನು ಪ್ರಧಾನಿ ಸ್ಥಾನ ಪಟ್ಟಕ್ಕೆ ಏರಿಸಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ.ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಹುಲ್ ಮತ್ತು ಮೋದಿ ವಾಗ್ದಾಳಿಯ ಹಿಂದಿರುವುದು ಭವಿಷ್ಯದ ನಾಯಕತ್ವದ ಪ್ರಶ್ನೆ ಅಡಗಿದೆ. ಆ ಕಾರಣಕ್ಕಾಗಿಯೇ ವಿವಿಧ ತೆರನಾದ ತಾಲೀಮಿಗೆ ಅಖಾಡ ಸಿದ್ದಪಡಿಸಿಕೊಂಡಿವೆ. |