ಬ್ಲಾಗಿಗರೇ ಎಚ್ಚರ, ನೀವಿನ್ನು ಬಾಯಿಗೆ ಬಂದ... ಅಲ್ಲಲ್ಲ... ಕೈಗೆ ಬಂದ ಹಾಗೆ, ಮನಸ್ಸಿಗೆ ಹೊಳೆದ ಹಾಗೆ ಬರೆಯುವ ಮೊದಲು, ಅಥವಾ ಯಾರದೋ ಬ್ಲಾಗಿನಲ್ಲಿ ಕಾಮೆಂಟು ಹಾಕುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಿ! ಯಾಕೆಂದರೆ ಅದು ನಿಮ್ಮನ್ನು ಮಾನನಷ್ಟ ಮೊಕದ್ದಮೆ ಅಥವಾ ಕ್ರಿಮಿನಲ್ ಕೇಸು ಎದುರಿಸುವಂತೆಯೂ ಮಾಡಬಹುದು!
19 ವರ್ಷದ ಬ್ಲಾಗರ್ ಒಬ್ಬರ ಬಗ್ಗೆ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಈ ರೀತಿ ಎಚ್ಚರಿಕೆ ವಹಿಸುವಂತೆ ಮಾಡಿದೆ. ಬ್ಲಾಗಿನಲ್ಲಿ ಇರುವ ಅಂಶಗಳು ಶಿಕ್ಷೆಗೂ ಅರ್ಹ ಎಂದು ಸುಪ್ರೀಂ ಕೋರ್ಟು ಹೇಳಿದೆ.
ಇನ್ನು ಯಾವುದೋ ಒಂದು ವಿಷಯವನ್ನೆತ್ತಿ, ಚರ್ಚೆಗೆ ಆಹ್ವಾನಿಸಿ, ಸಹ ಬ್ಲಾಗಿಗರಿಂದ ಅಶ್ಲೀಲ, ಮಾನಹಾನಿಕರ, ಅಸಭ್ಯ ಕಾಮೆಂಟುಗಳನ್ನು ಸ್ವೀಕರಿಸುತ್ತಾ, 'ಈ ಬ್ಲಾಗಿನಲ್ಲಿ ಬರೆದ ಬರೆಹಗಳು/ಪ್ರತಿಕ್ರಿಯೆಗಳು ಆಯಾ ಲೇಖಕರ ಅಭಿಪ್ರಾಯಗಳೇ ಹೊರತು, ಬ್ಲಾಗಿಗನದ್ದಲ್ಲ' ಎಂದು ಡಿಸ್‌ಕ್ಲೇಮರ್ ಬರೆದುಬಿಟ್ಟರೆ ಸಾಕಾಗುವುದಿಲ್ಲ.
ಇದೆಲ್ಲ ಪ್ರಾರಂಭವಾಗಿದ್ದು, ಶಿವಸೇನೆಯ ವಿರುದ್ಧ ಕೇರಳದ ಹುಡುಗ ಅಜಿತ್ ಡಿ. ಎಂಬಾತ ಮಾಡಿದ ಕಿತಾಪತಿಯಿಂದ. ಓರ್ಕುಟ್‌ನಲ್ಲಿ ಆತ ಶಿವಸೇನೆಯ ವಿರುದ್ಧ ಸಮುದಾಯವೊಂದನ್ನು ಪ್ರಾರಂಭಿಸಿದ್ದ. ಇದರಲ್ಲಿ ಅದೆಷ್ಟೋ ಮಂದಿ 'ಅನಾನಿಮಸ್'ಗಳು, ಬಾಯಿಗೆ ಬಂದಂತೆ ಶಿವಸೇನೆಯನ್ನು ದೂಷಿಸಿದ್ದರು. ಅಲ್ಲಿ ಹಲವಾರು ಪೋಸ್ಟ್‌ಗಳು, ಚರ್ಚೆಗಳ ಮಹಾಪೂರವೇ ಇತ್ತು. ಶಿವಸೇನೆಯು ಧರ್ಮ ಮತ್ತು ಜಾತಿಯ ಆಧಾರದಲ್ಲಿ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದೆಲ್ಲಾ ಆರೋಪಿಸಲಾಗಿತ್ತು.
ಈ ಪೋಸ್ಟ್‌ಗಳಿಗೆ ಪ್ರತಿಯಾಗಿ ಶಿವಸೇನೆಯ ಯುವ ಘಟಕದ ರಾಜ್ಯ ಕಾರ್ಯದರ್ಶಿ 2008ರ ಆಗಸ್ಟ್ ತಿಂಗಳಲ್ಲಿ ಮುಂಬಯಿ ಸಮೀಪದ ಥಾಣೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದರು. ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದ್ದಕ್ಕೆ ಸಂಬಂಧಿಸಿದಂತೆ ಅಜಿತ್ ವಿರುದ್ಧ ದಂಡ ಸಂಹಿತೆಯ 506 ಮತ್ತು 295 ಎ ಸೆಕ್ಷನ್ ಅನುಸಾರ ಎಫ್ಐಆರ್ ಕೂಡ ದಾಖಲಿಸಲಾಯಿತು.
ಆತನ ವಿರುದ್ಧ ಕ್ರಿಮಿನಲ್ ಕೇಸ್ ಜಡಿಯಲಾಗಿರುವುದರಿಂದ ಮಹಾರಾಷ್ಟ್ರದ ನ್ಯಾಯಾಲಯವು ಅವನಿಗೆ ಸಮನ್ಸ್ ಕಳುಹಿಸಿತ್ತು. ಕೇರಳ ಹೈಕೋರ್ಟ್ ಮೂಲಕ ನಿರೀಕ್ಷಣಾ ಜಾಮೀನು ಪಡೆದುಕೊಂಡ ಈ ಬ್ಲಾಗಿಗ, ವಕೀಲರ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋದ. ಬ್ಲಾಗಿನಲ್ಲಿರುವ ಬರಹಗಳು ಸಮುದಾಯದೊಳಗಿನ ಸಂವಹನಕ್ಕಾಗಿ ಸೀಮಿತವಾಗಿತ್ತು ಮತ್ತು ಅದರಲ್ಲಿ ಮಾನನಷ್ಟಕ್ಕೆ ಸಂಬಂಧಿಸಿ ಏನೂ ಇರಲಿಲ್ಲ ಎಂದು ವಾದಿಸಿ, ಕ್ರಿಮಿನಲ್ ಕೇಸು ರದ್ದುಪಡಿಸಬೇಕೆಂದು ಆತ ವಾದಿಸಿದ.
ಅಂತೆಯೇ, ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಹಾಜರಾದರೆ, ತನ್ನ ಜೀವಕ್ಕೂ ಅಪಾಯವಿದೆ ಎಂದು ಆತ ಹೇಳಿದ್ದ. ಬ್ಲಾಗಿನಲ್ಲಿರುವ ಕಾಮೆಂಟ್‌ಗಳು ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಣಾಮವಷ್ಟೇ ಆಗಿರುವುದರಿಂದ ಇದನ್ನು ಪೊಲೀಸರು ಅಪರಾಧ ಎಂದು ಪರಿಗಣಿಸಬಾರದು ಎಂಬುದು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಜಿತ್ ವಾದ.
ಆದರೆ, ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, "ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಲು ಸಾಧ್ಯವಿಲ್ಲ. ನೀನೊಬ್ಬ ಕಂಪ್ಯೂಟರ್ ವಿದ್ಯಾರ್ಥಿ ಮತ್ತು ಎಷ್ಟು ಮಂದಿ ಇಂಟರ್ನೆಟ್ ನೋಡುತ್ತಾರೆ ಎಂಬುದು ನಿನಗೆ ತಿಳಿದಿದೆ. ಹೀಗಾಗಿ ಈ ಕೇಸನ್ನು ಎದುರಿಸಲೇಬೇಕು. ನ್ಯಾಯಾಲಯಕ್ಕೆ ಹೋಗಿ, ವಿವರಣೆ ನೀಡಲೇಬೇಕು" ಎಂದು ತೀರ್ಪು ನೀಡಿದೆ. |