ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಪೊಲೀಸ್ ಹಾಗೂ ವಕೀಲರ ನಡುವೆ ನಡೆದ ಘರ್ಷಣೆಯನ್ನು ಇತ್ಯರ್ಥಪಡಿಸಲು ರಾಜ್ಯ ಕಾನೂನು ಸಚಿವ ದೊರೈ ಮುರುಗನ್ ಅವರು ಕರೆದ ಮಾತುಕತೆ ಸಭೆಯನ್ನು ವಕೀಲರು ಮಂಗಳವಾರ ತಿರಸ್ಕರಿಸುವ ಮೂಲಕ ರಾಜ್ಯ ಸರಕಾರವನ್ನು ಮುಗಭಂಗಕ್ಕೀಡು ಮಾಡಿದ್ದಾರೆ.
ವಕೀಲರು ಹಾಗೂ ರಾಜ್ಯ ಪೊಲೀಸರ ನಡುವೆ ಎರಡು ಸುತ್ತಿನ ಮಾತುಕತೆ ನಡೆಸುವಂತೆ ಸಚಿವ ಮುರುಗನ್ ಕರೆ ನೀಡಿದ್ದರು. ಆದರೆ ವಕೀಲರು ಸಂಧಾನ ಮಾತುಕತೆಗೆ ನಕಾರ ವ್ಯಕ್ತಪಡಿಸಿದ್ದರಿಂದ ರಾಜ್ಯ ಸರಕಾರ ಪೇಚಿಗೆ ಸಿಲುಕುವಂತಾಗಿದೆ.
ಏತನ್ಮಧ್ಯೆ ವಕೀಲರು ಹಾಗೂ ಪೊಲೀಸರ ನಡುವಿನ ಸಂಘರ್ಷವನ್ನು ಕೂಡಲೇ ಮಾತುಕತೆ ಮುಖೇನ ಬಗೆಹರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ತಾನೇ ಸ್ವತಃ ಉಪವಾಸ ಮುಷ್ಕರ ನಡೆಸುವುದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಕರುಣಾನಿಧಿ ಕೂಡ ಎಚ್ಚರಿಕೆ ನೀಡಿದ್ದರು.
ಕಳೆದ ಮಂಗಳವಾರ ಮದ್ರಾಸ್ ಹೈಕೋರ್ಟ್‌ಗೆ ಜನತಾಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಆಗಮಿಸಿದ ಸಂದರ್ಭದಲ್ಲಿ ಅವರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 13ಮಂದಿ ವಕೀಲರನ್ನು ಪೊಲೀಸರು ಬಂಧಿಸಲು ಮುಂದಾದ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಘರ್ಷಣೆ ನಡೆದು ರಣರಂಗವಾಗಿ ಮಾರ್ಪಟ್ಟಿತ್ತು. ಘರ್ಷಣೆಯಲ್ಲಿ ನ್ಯಾಯಾಧೀಶರು, ಪೊಲೀಸ್, ವಕೀಲರು ಹಾಗೂ ಪತ್ರಕರ್ತರು ಗಾಯಗೊಂಡಿದ್ದರು. |