ನಗರದ ಪಾರಿಂಪೋರಾದಲ್ಲಿ ಯುವಕನ ಮೃತದೇಹ ಪತ್ತೆಯಾದ ಬಳಿಕ ಶ್ರೀನಗರದ ಹಲವೆಡೆ ಮಂಗಳವಾರ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹೊರವಲಯವಾದ ಪಾರಿಂಪೋರಾ ಪ್ರದೇಶದ ಷರೀಫಾಬಾದ್‌ನ ಮೈಸುಮಾ ನಿವಾಸಿ ಶಬೀರ್ ಅಹ್ಮದ್ ಮೃತ ದೇಹವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ನಂತರ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
ಆಟೋ ಚಾಲಕ ವೃತ್ತಿ ಮಾಡುತ್ತಿದ್ದ ಶೇಕ್ ಕಳೆದ ರಾತ್ರಿ ಮನೆಗೆ ಹಿಂದಿರುಗಿರಲಿಲ್ಲವಾಗಿತ್ತು ಎಂದು ಪ್ರಾಥಮಿಕ ವರದಿ ತಿಳಿಸಿದ್ದು, ಮಂಗಳವಾರ ಬೆಳಿಗ್ಗೆ ಆತನ ಮೃತದೇಹ ದೊರೆತಿದ್ದು ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸ್ ಕಂಟ್ರೋಲ್ ರೂಂಗೆ ತರಲಾಗಿತ್ತು. ಮೃತದೇಹ ತಂದ ವಿಷಯ ಮೈಸುಮಾ ಪ್ರದೇಶದಾದ್ಯಂತ ಹಬ್ಬುತ್ತಿದ್ದಂತೆಯೇ ಜನ ಗುಂಪು, ಗುಂಪಾಗಿ ಸೇರಿ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕೆಂದು ಘೋಷಣೆ ಕೂಗತೊಡಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ.
ರೊಚ್ಚಿಗೆದ್ದ ಸ್ಥಳೀಯರು ವಾಣಿಜ್ಯ ಕೇಂದ್ರವಾದ ಲಾಲ್ ಚೌಕ್, ಬುಡ್‌ಷಾ ಚೌಕ್, ಹರಿ ಸಿಂಗ್ ಹೈ ಸ್ಟ್ರೀಟ್ ಮತ್ತು ಇನ್ನುಳಿದ ಕೆಲವು ಪ್ರದೇಶಗಳಲ್ಲಿ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಪ್ರತಿಭಟನೆ ನಡೆಸಿದರು. ಮೃತ ಯುವಕ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‌ಎಫ್)ನ ವರಿಷ್ಠ ಯಾಸಿನ್ ಮಲಿಕ್ ಸಂಬಂಧಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. |