ಮಹಿಳಾ ಕಾಲೇಜಲ್ಲಿ ಪದವಿ ಜತೆಗೆ ಸೂಕ್ತ ಸಂಗಾತಿಯನ್ನೂ ಹುಡುಕಲು ಶಿಕ್ಷಕರೇ ಸಹಾಯ ಮಾಡಿದರೆ?! ಇದಕ್ಕಿಂತ ದೊಡ್ಡ ಸುವರ್ಣಾವಕಾಶ ಮತ್ತೊಂದಿಲ್ಲ ಎಂದು ಬಹುತೇಕ ಹುಡುಗಿಯರು ಖುಷಿ ಪಟ್ಟುಕೊಳ್ಳಬಹುದು. ಪಕ್ಕದ ಕಾಲೇಜಿನ ಹುಡುಗರು ನಮಗೆ ಇಂಥ ಅವಕಾಶ ಇಲ್ಲವಲ್ಲ ಅಂತ ಪೆಚ್ಚುಮೋರೆ ಹಾಕಬಹುದು. ಆದರೆ, ಇಂಥ ಕಾಲೇಜು ಎಲ್ಲಿಯೂ ಇರಲಿಕ್ಕಿಲ್ಲ ಅಂತ ಊಹಿಸುತ್ತಿದ್ದರೆ, ಆ ಊಹೆ ಖಂಡಿತ ಸುಳ್ಳು. ಜೆಮ್‌ಶೆಡ್‌ಪುರದ ಪ್ರತಿಷ್ಠಿತ ಮಹಿಳಾ ಕಾಲೇಜೊಂದು ಈ ನವೀನ ಪ್ರಯೋಗಕ್ಕೆ ಮುಂದಾಗಿದ್ದು, ಶಿಕ್ಷಣದ ಜತೆಗೇ ತಮ್ಮ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ವೇದಿಕೆ ಸೃಷ್ಟಿಸಿದೆ.
ಯುಜಿಸಿಯಿಂದ ಸ್ವಾಯತ್ತತೆ ಪಡೆದುಕೊಂಡಿರುವ ಜೆಮ್‌ಶೆಡ್‌ಪುರ ಮಹಿಳಾ ಕಾಲೇಜು ಸದ್ಯದಲ್ಲೇ `ಸ್ವಯಂವರ' ಎಂಬ ವೇದಿಕೆಯೊಂದನ್ನು ಆರಂಭಿಸಲಿದೆ. ಇದು ಆ ಕಾಲೇಜಿನ ಪ್ರಾಂಶುಪಾಲರಾದ ಶುಕ್ಲಾ ಮೊಹಂತಿ ಅವರ ಕನಸಿನ ಕೂಸಾಗಿದ್ದು, ಇದನ್ನು ಅದೇ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ನೋಡಿಕೊಳ್ಳಲಿದೆ. ಈ ವೇದಿಕೆಯ ಮೂಲಕ ಸೂಕ್ತ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಕಾಲೇಜು ಶಿಕ್ಷಕರು ವಿದ್ಯಾರ್ಥಿನಿಯರಿಗೆ ಸಹಾಯ ಮಾಡಲಿದ್ದಾರೆ.
ಪದವಿ ಶಿಕ್ಷಣ ಮುಗಿದ ತಕ್ಷಣ ಮಗಳನ್ನು ಮದುವೆ ಮಾಡಿಸುವ ಜವಾಬ್ದಾರಿ ಹೆತ್ತವರ ಮೇಲಿರುತ್ತದೆ. ಆ ಸಂದರ್ಭ ಹೆತ್ತವರಿಗೆ ಕಾಡುವ ತಲೆನೋವು ವರದಕ್ಷಿಣೆ. ವರದಕ್ಷಿಣೆ ಮುಕ್ತ ವಿವಾಹವನ್ನು ರೂಪಿಸುವುದು ಕಾಲೇಜಿನ ಈ ಸ್ವಯಂವರ ವೇದಿಕೆಯ ಗುರಿಯಾಗಿದ್ದು, ಇದು ಬಹುತೇಕ ಹೆತ್ತವರ ಜವಾಬ್ದಾರಿಯನ್ನು ಹಗುರ ಮಾಡಲಿದೆ ಎನ್ನುತ್ತಾರೆ ಶುಕ್ಲಾ ಮೊಹಂತಿ. ಇದು ಮದುವೆ ದಲ್ಲಾಳಿ ಕೇಂದ್ರವಲ್ಲ ಎನ್ನುವ ಮೊಹಂತಿ, ಹೆತ್ತವರ ಜವಾಬ್ದಾರಿಗೆ ಹೆಗಲು ಕೊಡುವ ಕೆಲಸವಷ್ಟೆ ಎನ್ನುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸ್ವಯಂವರ ಕಾರ್ಯ ನಿರ್ವಹಿಸಲು ಆರಂಭಿಸಲಿದೆ ಎನ್ನುತ್ತಾರೆ.
ಅಂದಹಾಗೆ, ಇಲ್ಲಿ ವಿದ್ಯಾರ್ಥಿನಿಯರಿಗೆ ಒಂದು ಶರತ್ತೂ ಇದೆ. ವಿದ್ಯಾರ್ಥಿನಿಯರು ಸಂಗಾತಿಯ ಆಯ್ಕೆಯ ನಂತರ ಮದುವೆಯಾಗಬೇಕೆಂದರೆ ಆಕೆ ತನ್ನ ಪದವಿಯನ್ನು ಪೂರ್ಣಗೊಳಿಸಬೇಕು. |