ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ಅವರ ಲೋಕಸಭಾ ಕ್ಷೇತ್ರದ ದಲಿತ ಮಹಿಳೆ ರಜಿತಾ ಆಂಧ್ರದ ಖಮ್ಮಾಮ್ ಸರಕಾರಿ ಆಸ್ಪತ್ರೆಯಲ್ಲಿ ಲಂಚಕ್ಕಾಗಿ ತನ್ನ ಒಂದು ದಿನದ ಹಸುಳೆಯನ್ನೇ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಘಟನೆ ವಿವರ: 20ರ ಹರೆಯದ ರಜಿತಾ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗಾಗಿ ದಾಖಲಾದ ಸಂದರ್ಭದಲ್ಲಿ, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಬೇಕಿದ್ದರೆ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಆಕೆ ಬಳಿ ಲಂಚ ನೀಡಲು ಬಿಡಿಗಾಸು ಇರಲಿಲ್ಲ, ಆ ಸಂದರ್ಭದಲ್ಲಿ ಅಲ್ಲಿಗಾಮಿಸಿದ ಲಾರಿ ಚಾಲಕನೊಬ್ಬ ತಾನು ಲಂಚದ ಹಣ 2,200ರೂ. ನೀಡುವುದಾಗಿ ಭರವಸೆ ನೀಡಿ, ತನಗೆ ಮಗುವನ್ನು ಮಾರಾಟ ಮಾಡಬೇಕೆಂದು ಆತ ತಿಳಿಸಿದ್ದ, ಅದರಂತೆ ಒಂದು ದಿನದ ಗಂಡುಮಗುವನ್ನು 6 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಳು.
ನನ್ನ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ತನಗೆ ಬೇರೆ ದಾರಿಯೇ ಇರಲಿಲ್ಲವಾಗಿತ್ತು, ಆ ಕಾರಣಕ್ಕಾಗಿಯೇ ತಾನು ತನ್ನ ಮಗುವನ್ನು ಆರು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ರಜಿತಾ ಅಸಹಾಯಕತೆಯಿಂದ ನುಡಿದಿದ್ದಾಳೆ. ಆದರೆ ಆಕೆಯ ಸಂಬಂಧಿಯೊಬ್ಬರ ಆಸ್ಪತ್ರೆ ವೈದ್ಯರ ಲಂಚಾವತಾರದ ಬಗ್ಗೆ ಕಿಡಿಕಾರಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಗು ಮಾರಾಟ ಮತ್ತು ಲಂಚ ಪ್ರಕರಣ ನಡೆದೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಮಗು ಮಾರಾಟ ಮತ್ತು ಪಡೆಯುವುದು ಎರಡೂ ಅಪರಾಧವಾಗಿದೆ. ಆ ನಿಟ್ಟಿನಲ್ಲಿ ನಾವು ದೂರನ್ನು ದಾಖಲಿಸಿಕೊಂಡಿರುವುದಾಗಿ ರೆವಿನ್ಯೂ ವಿಭಾಗದ ಅಧಿಕಾರಿ ರಾಜಾರಾಂ ತಿಳಿಸಿದ್ದಾರೆ. |