ಕಳ್ಳತನದ ಆರೋಪದ ಮೇಲೆ ನಾಲ್ವರನ್ನು 150 ಜನರ ಗುಂಪೊಂದು ಪೊಲೀಸರ ಕಣ್ಮುಂದೆಯೇ ಥಳಿಸಿ ಕೊಂದಿರುವ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ.
ಸ್ವತಃ ಕಾನೂನನ್ನು ಕೈಗೆತ್ತಿಕೊಂಡ ಈ ಘಟನೆಯು ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿಯಾಗಿದ್ದು, ಪೊಲೀಸರು ವಹಿಸಿದ ಪಾತ್ರದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ನಾಲ್ವರು ಕಳ್ಳರನ್ನು ಹಿಡಿದ ಗುಂಪು ಥಳಿಸುತ್ತಿದ್ದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿ ಅರ್ಧ ಗಂಟೆ ಕಾಲ ವೀಕ್ಷಿಸಿದ್ದು, ಬಳಿಕ ಥಳಿತದಿಂದ ನಿಸ್ಸಹಾಯಕರಾದ ನಾಲ್ವರನ್ನು ಆಸ್ಪತ್ರೆಗೆ ಒಯ್ಯಲು ಎರಡು ಗಂಟೆ ತೆಗೆದುಕೊಂಡಿದ್ದು, ಪೊಲೀಸರ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ಸೋಮವಾರ ರಾತ್ರಿವರೆಗೆ, ಯಾರನ್ನೂ ಬಂಧಿಸಲಾಗಿಲ್ಲ.
ಕಳ್ಳರು ನಿವಾಸಿಗಳ ಮೇಲೆ ಗುಂಡು ಹಾರಿಸಿದ್ದರಿಂದ ಇದೊಂದು ಆತ್ಮರಕ್ಷಣೆಯ ಪ್ರಕರಣವೆಂದು ಲೋನಿ ಪೊಲೀಸ್ ನಿಲ್ದಾಣದ ಮುಖ್ಯಸ್ಥ ಪಿ.ಎಸ್.ರಾಣಾ ಸಮರ್ಥಿಸಿಕೊಂಡಿದ್ದಾರೆ. ಇದೊಂದು ಸಾರ್ವಜನಿಕ ಚಕಮಕಿ ಎಂದು ಇನ್ನೊಬ್ಬ ಪೊಲೀಸ್ ಬಣ್ಣನೆ ಮಾಡಿದ್ದಾನೆ.
ಆದರೆ ಸತ್ಯಾಂಶವೇನೆಂದರೆ ಲೂಟಿಕೋರರು ಕೇವಲ ಗಾಳಿಯಲ್ಲಿ ಒಮ್ಮೆ ಮಾತ್ರ ಗುಂಡುಹಾರಿಸಿದ ಬಳಿಕ ಅವರ ಪಿಸ್ತೂಲು ನಿಷ್ಕ್ರಿಯಗೊಂಡಿತ್ತು. ಕಳ್ಳರು ನೊಯ್ಡಾದ ಪ್ರಾಂಶುಪಾಲದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಅವರ ಮೇಲೆ ಸ್ಥಳೀಯರು ದಾಳಿ ಮಾಡಿದರು.
ಕಾಲೋನಿಯ ಚೌಕಕ್ಕೆ ಕಳ್ಳರನ್ನು ಎಳೆದುತಂದ ಗುಂಪು ಅವರ ಮೇಲೆ ಇಟ್ಟಿಗೆ, ರಾಡ್, ಲಾಠಿ ಮತ್ತಿತರ ಕೈಗೆ ಸಿಕ್ಕಿದ ವಸ್ತುಗಳಿಂದ ಥಳಿಸಿತು. ಒಬ್ಬನನ್ನು ಕಟ್ಟಡದ ಕಂಬಕ್ಕೆ ಕಟ್ಟಿ ಸಿಕ್ಕಾಪಟ್ಟೆ ಥಳಿಸಲಾಯಿತು. ಅವರೆಲ್ಲರನ್ನೂ ಆಸ್ಪತ್ರಗೆ ಸೇರಿಸುವಷ್ಟರಲ್ಲಿ ಅಸುನೀಗಿದ್ದರು. ಕಾಲೋನಿಯ ಚೌಕದ ಬಳಿ ರಕ್ತವು ನೆಲದ ಮೇಲೆ ಚೆಲ್ಲಾಡಿತು. ಚೆಲ್ಲಾಪಿಲ್ಲಿಯಾಗಿ ಬಿದ್ದ ಇಟ್ಟಿಗೆಯ ಚೂರುಗಳು ದಾರುಣ ಕಥೆಗೆ ಸಾಕ್ಷಿಯಾದವು. |