ಹರ್ಯಾಣದ 14ರ ಬಾಲೆಯೊಬ್ಬಳು ಉದ್ಯೋಗವರಸುತ್ತಾ ದೆಹಲಿಗೆ ಬಂದಿದ್ದಾಗ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಆಮಿಷ ತೋರಿಸಿ ನಂತರ ವ್ಯಕ್ತಿಗಳಿಬ್ಬರಿಗೆ ಒಂದು ಲಕ್ಷ ರೂಪಾಯಿಗಳಿಗೆ ಅಕ್ರಮ ಮಾರಾಟ ಮಾಡಿದ್ದಳು. ಆ ಇಬ್ಬರು ವ್ಯಕ್ತಿಗಳು ಇತರ ಮೂವರ ಜತೆ ಸೇರಿ ನಿರಂತರ ಅಮಾನುಷವಾಗಿ ಅತ್ಯಾಚಾರಗೈದಿದ ಘಟನೆ ವರದಿಯಾಗಿದೆ.
ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇತರ ಮೂವರಲ್ಲಿ ಒಬ್ಬಾತ ದೆಹಲಿಯ ಜೆಹಾಂಗೀರ್‌ಪುರಿಯವ. ಅಪ್ರಾಪ್ತ ಹುಡುಗಿಯನ್ನು ಅಕ್ರಮವಾಗಿ ಖರೀದಿಸಿದವನು ಸೇರಿದಂತೆ ಬಂಧಿತ ಇಬ್ಬರೂ ಸೋನೆಪೇಟ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ರಾಕ್ಷಸರ ಹಿಡಿತದಿಂದ ತಪ್ಪಿಸಿಕೊಂಡ ಹುಡುಗಿ ಸೋನೆಪೇಟ್‌ನ ಮುರ್ತಾಲ್ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ದೂರು ದಾಖಲಿಸಿರುವ ಸಂತ್ರಸ್ತೆ, ತನ್ನನ್ನು ಕಳೆದೊಂದು ತಿಂಗಳಿನಲ್ಲಿ ಹಲವಾರು ಬಾರಿ ದೈಹಿಕ ಶೋಷಣೆಗೊಳಪಡಿಸಲಾಗಿದೆ ಎಂದಿದ್ದಾಳೆ.
ತಾಯಿಯನ್ನು ಕೆಲ ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ನತದೃಷ್ಟೆಗೆ ಇದ್ದ ಏಕೈಕ ಆಧಾರ ತಂದೆ ಕೂಡ ಕಳೆದ ಏಳು ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ಈ ಕಾರಣದಿಂದ ತಾನು ಅನಾಥಳಾಗಿದ್ದೇನೆ ಎಂದು ಕರುಣಾಜನಕ ಸ್ಥಿತಿಯನ್ನೂ ಆಕೆ ವಿವರಿಸಿದ್ದಾಳೆ.
ದೆಹಲಿಯಲ್ಲಿ ಆಮಿಷ ತೋರಿಸಿದ ಮಹಿಳೆಯನ್ನು ಜೆಹಾಂಗಿರಿಪುರಿ ಕಾಲೊನಿಯ ಶಂಕುಂತಲಾ ಎಂದು ಗುರುತಿಸಿರುವ ಅಪ್ರಾಪ್ತೆ, ಆಕೆ ತನ್ನನ್ನು ಮಗಳಂತೆ ನೋಡಿಕೊಳ್ಳುವುದಾಗಿ ಹೇಳಿದ್ದಳು ಎಂದು ಬಹಿರಂಗಪಡಿಸಿದ್ದಾಳೆ. ಕೆಲವಾರು ತಿಂಗಳುಗಳ ಕಾಲ ಹುಡುಗಿಯನ್ನು ದೆಹಲಿಯ ಮನೆಯಲ್ಲೇ ಇಟ್ಟುಕೊಂಡಿದ್ದ ಮಹಿಳೆ ನಂತರ ಸೋನೆಪೇಟ್ ಜಿಲ್ಲೆಯ ನಾಂಗಾಲ್ ಖುರ್ದ್ ಗ್ರಾಮದ ಜೈವೀರ್ ಎಂಬಾತನಿಗೆ ಅಕ್ರಮವಾಗಿ ಒಂದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಳು. ಜನವರಿ 14ರಂದು ಆಕೆಯನ್ನು ನಾಂಗಾಲ್ ಖುರ್ದ್ ಗ್ರಾಮಕ್ಕೆ ಒತ್ತಾಯವಾಗಿ ಕರೆದೊಯ್ಯಲಾಯಿತು. ಅಲ್ಲದೇ ಹುಡುಗಿಗೆ ನಿನ್ನನ್ನು ಆತನಿಗೆ (ಜೈವೀರ್) ಮದುವೆ ಮಾಡಿಸಲಾಗಿದೆ ಎಂದು ಹೇಳಲಾಯಿತು.
ಜೈವೀರ್, ಆತನ ತಂದೆ, ಜಗದೀಶ್ ಮತ್ತು ಇತರ ಮೂವರಾದ ಪ್ರತಾಪ್, ಮೆಹ್ತಾಬ್ ಸೇರಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾಗಿದೆ. ತನ್ನನ್ನು ಸತತವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಲಾಗಿತ್ತು ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ.
ಐಪಿಸಿ ಸೆಕ್ಷನ್ 376, 566 ಮತ್ತು 506ರಡಿಯಲ್ಲಿ ಆರು ಮಂದಿಯ ವಿರುದ್ಧ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುರ್ತಲ್ ಪೊಲೀಸ್ ಠಾಣಾಧಿಕಾರಿ ರಾಂಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
|